

ಶ್ರೀನಿವಾಸಪುರ: ವಿಶ್ವಕ್ಕೆ ವಿವಿಧ ತಳಿಯ ಮಾವು ನೀಡುತ್ತಿರುವ ಶ್ರೀನಿವಾಸಪುರ ತಾಲೂಕಿನ ರೈತರು ಕರೊನಾದಿಂದ ಸಂಕಷ್ಟಕ್ಕೆ ಸಿಲುಕುವಂತಾಗಿದ್ದು, ಪಟ್ಟಣದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ.
ಮಾವು ಮಾರುಕಟ್ಟೆ ಪ್ರಾರಂಭದ ವಿಚಾರದಲ್ಲಿ ಜಿಜ್ಞಾಸೆಯ ನಡುವೆಯೇ ರೈತರ ಕೋರಿಕೆ ಮೇರೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಚಿಂತನೆ ನಡೆಸಿರುವಾಗ ಸನ್‌ಸಿಪ್ ಕಾರ್ಖಾನೆ ಸಿಬ್ಬಂದಿಗೆ ಕರೊನಾ ಅವರಿಸಿಕೊಂಡಿರುವುದರಿಂದ ಬೆಳೆಗಾರರು ಧೃತಿಗೆಡುವಂತಾಗಿದೆ.
ಕಾರ್ಖಾನೆಗೆ ಆಂಧ್ರದಿಂದ ಮಾವು ಮತ್ತು ಟೊಮ್ಯಾಟೊ ಸರಬರಾಜು ಮಾಡಿರುವ ಹಿನ್ನೆಲೆಯಲ್ಲಿ ಕಂಪನಿಯ 53 ಸಿಬ್ಬಂದಿಯನ್ನು 14 ದಿನ ಕ್ವಾರಂಟೈನ್‌ಗೆ ಒಳಪಡಿಸಿ ವೈದ್ಯಕೀಯ ಪರೀಕ್ಷೆಯಲ್ಲಿ ನೆಗೆಟಿವ್ ದೃಢಪಟ್ಟಿರುವುದರಿಂದ ಭಾನುವಾರ ಬಿಡುಗಡೆ ಮಾಡಲಾಗಿತ್ತು. ಕೆಲವೇ ಗಂಟೆಗಳ ಬಳಿಕ ಸದರಿ ಕಾರ್ಖಾನೆ ಭದ್ರತಾ ಸಿಬ್ಬಂದಿಗೆ ಕರೊನಾ ದೃಢಪಟ್ಟಿರುವ ಅಂಶ ಸ್ಫೋಟಗೊಂಡು ಮಾವು ಬೆಳೆಗಾರರ ಎದೆ ನಡುಗಲಾರಂಭಿಸಿದೆ.
ಕ್ವಾರಂಟೈನ್‌ನಲ್ಲಿದ್ದಾಗಲೇ ಸೋಂಕು: ಭದ್ರತಾ ಸಿಬ್ಬಂದಿ ಕ್ವಾರಂಟೈನ್‌ನಲ್ಲಿದ್ದಾಗಲೇ ಸೋಂಕು ಹರಡಿರುವುದು ಕಾರ್ಖಾನೆ ಸಿಬ್ಬಂದಿ ಮತ್ತು ಜನತೆಯಲ್ಲಿ ಅಚ್ಚರಿ ಮೂಡಿಸಿದೆ. ಜತೆಗೆ ಸೋಂಕಿತ ದಾವಣಗೆರೆ ಮತ್ತು ತಾಲೂಕಿನ ಇನ್ನಿತರ ಕಡೆ ಸಂಪರ್ಕ ಹೊಂದಿದ್ದಾರೆಂಬ ಕಾರಣದಿಂದ ತಾಲೂಕು ಆಡಳಿತ ಪ್ರಾಥಮಿಕ ಸಂಪರ್ಕ ವಿವರ ಸಂಗ್ರಹಿಸಲು ಪರದಾಡುತ್ತಿದೆ.
ಪರ‌್ಯಾಯ ವ್ಯವಸ್ಥೆಗೆ ಒತ್ತಾಯ: ಕಾರ್ಖಾನೆ ಕಾರ್ಮಿಕರು ಕರೊನಾದಿಂದ ಮುಕ್ತವಾಗಿರುವ ವಿಷಯ ತಿಳಿಯುತ್ತಿದ್ದಂತೆ ತಾಲೂಕಿನ ಜನ ನಿಟ್ಟುಸಿರು ಬಿಟ್ಟಿದ್ದರಾದರೂ ಆಶ್ಚರ್ಯಕರ ರೀತಿಯಲ್ಲಿ ಸೋಂಕು ಕಾಣಿಸಿಕೊಂಡಿರುವುದರಿಂದ ಮಾವಿನ ಮಾರಾಟಕ್ಕೆ ಪರ‌್ಯಾಯ ವ್ಯವಸ್ಥೆ ಜತೆಗೆ ರೈತರ ರಕ್ಷಣೆಗೆ ಮುಂದಾಗುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ಒಬ್ಬನಿಗೆ ಸೋಂಕು ಕಾಣಿಸಿಕೊಂಡಿರುವುದರಿಂದ ಎಪಿಎಂಸಿ ಸೀಲ್‌ಡೌನ್ ಮಾಡಲು ಡಿಸಿ ಚಿಂತನೆ ನಡೆಸಿದ್ದಾರೆಂಬ ಮಾಹಿತಿಯಿಂದ ರೈತರು ಕಂಗಾಲಾಗಿದ್ದಾರೆ.
ಸೀಲ್‌ಡೌನ್: ಕೋಲಾರ-ಶ್ರೀನಿವಾಸಪುರ ರಸ್ತೆಯ ವೇಣು ವಿದ್ಯಾಸಂಸ್ಥೆ ಆಜುಬಾಬು ಪ್ರದೇಶ, ನ್ಯಾಯಾಲಯ ಸಂಕೀರ್ಣ, ಕೆಎಸ್‌ಆರ್‌ಟಿಸಿ ನೂತನ ಬಸ್ ನಿಲ್ದಾಣ ಇನ್ನಿತರ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಆಗಿ ಘೋಷಿಸಿ ಸಾರ್ವಜನಿಕರನ್ನು ಮನೆಯಿಂದ ಆಚೆ ಬರದಂತೆ ನಿರ್ಬಂಧಿಸಲಾಗಿದೆ.
ಆಶಾ ಕಾರ್ಯಕರ್ತರು ಕಂಟೇನ್ಮೆಂಟ್ ಜೋನ್ ವ್ಯಾಪ್ತಿಯ ಮನೆಗಳಿಗೆ ತೆರಳಿ ಸರ್ವೇ ನಡೆಸಿದರೆ, ಪಟ್ಟಣದಲ್ಲಿ ಸೋಂಕು ಹರಡದಂತೆ ಪುರಸಭೆಯಿಂದ ಸೋಂಕು ನಿವಾರಕ ಸಿಂಪಡಣೆ ಮತ್ತು ಸ್ವಚ್ಛತಾ ಕಾರ್ಯ ಕೈಗೊಂಡಿದ್ದು, ಕರೊನಾ ಸೇನಾನಿಗಳ ಮೂಲಕ ಅಗತ್ಯ ವಸ್ತು ಸರಬರಾಜಿಗೆ ತಾಲೂಕು ಆಡಳಿತ ವ್ಯವಸ್ಥೆ ಮಾಡಿದೆ.
ಅಘೋಷಿತ ಬಂದ್: ಕರೊನಾ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ಲಾಕ್‌ಡೌನ್ ವೇಳೆಯೂ ಬೇಕಾಬಿಟ್ಟಿ ಓಡಾಟ ನಡೆಸುತ್ತಿದ್ದವರು ಕೂಡ ಈಗ ಕರೊನಾ ಪೆಟ್ಟಿಗೆ ನಲುಗಿ ಹೋಗಿದ್ದು, ಮನೆಯಿಂದ ಹೊರಬರಲು ಹಿಂಜರಿಯುವಂತಾಗಿದೆ.
ಪಟ್ಟಣದ ಸನ್‌ಸಿಪ್ ಕಾರ್ಖಾನೆ ಸಿಬ್ಬಂದಿಗೆ ಕರೊನಾ ದೃಢಪಟ್ಟಿರುವುದರಿಂದ ಮುಂಜಾಗ್ರತಾ ಕ್ರಮಕ್ಕಾಗಿ ಅಧಿಕಾರಿಗಳೊಂದಿಗೆ ನಿರಂತರ ಸಭೆ ನಡೆಸಲಾಗಿದೆ. ಜನರು ಮನೆಗಳಿಂದ ಹೊರಬರದೆ ಸರ್ಕಾರದ ಮಾರ್ಗಸೂಚಿ ಪಾಲಿಸಿ ಕರೊನಾ ವಿಸ್ತಾರಗೊಳ್ಳದಂತೆ ಎಚ್ಚರವಹಿಸಬೇಕು. ಕೆ.ಎಸ್.ಶ್ರೀನಿವಾಸ್, ತಹಸೀಲ್ದಾರ್, ಶ್ರೀನಿವಾಸಪುರ ಒಂದು ಪ್ರಕರಣ ದೃಢಪಟ್ಟಿರುವುದರಿಂದ ಸಮುದಾಯಕ್ಕೆ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡುವ ಮೂಲಕ ತಾಲೂಕನ್ನು ಕರೊನಾಮುಕ್ತಗೊಳಿಸಲು ಸಹಕರಿಸಬೇಕು. ಡಾ.ಶ್ರೀನಿವಾಸ್, ತಾಲೂಕು ವೈದ್ಯಾಧಿಕಾರಿ, ಶ್ರೀನಿವಾಸಪುರ