ಮಾವು ಚಿಗುರಿನಲ್ಲಿ ಕಾಣಿಸಿಕೊಂಡ ಹೂವು, ಮತ್ತೊಮ್ಮೆ ಔಷಧ ಸಿಂಪಡಣೆಗೆ ಮುಂದಾದ ಬೆಳೆಗಾರ

14 Srinivaspur 3
Published on

ಶ್ರೀನಿವಾಸಪುರ: ಹವಾಮಾನ ವೈಪರೀತ್ಯದಿಂದಾಗಿ ಮಾವಿನ ಫಸಲು ಈ ವರ್ಷ ಇಳಿಮುಖವಾಗಿದ್ದರೂ ಮೂರು ಹಂತಗಳಲ್ಲಿ ಗಿಡಗಳಲ್ಲಿ ಹೂವು ಕಾಣಿಸಿಕೊಳ್ಳುತ್ತಿರುವುದರಿಂದ ರೈತನಿಗೆ ಔಷಧ ಸಿಂಪಡಣೆ ಹೊರೆ ಹೆಚ್ಚಾಗಿದ್ದು, ನಷ್ಟದ ಮೇಲೆ ಮತ್ತಷ್ಟು ನಷ್ಟ ಉಂಟಾಗುವಂತಾಗಿದೆ.

ಪ್ರತಿವರ್ಷ ೆಬ್ರವರಿ ಅಂತ್ಯಕ್ಕೆ ಹೂವು ಅಂತ್ಯಗೊಂಡು ಪಿಂದೆಗಳಾಗುತ್ತಿದ್ದವು. ಆದರೆ ಈ ವರ್ಷ ಜನವರಿಯಲ್ಲಿ ಕಾಣಿಸಿಕೊಂಡ ಹೂವು ಶೇ.5 ಮಾತ್ರ. ಫೆಬ್ರವರಿಯಲ್ಲಿ ಶೇ.5ರಷ್ಟು ಹೂವು ಕಾಣಿಸಿಕೊಂಡಿತ್ತು. ನಂತರ ಮರಗಳಲ್ಲಿ ಚಿಗುರು ಕಾಣಿಸಿಕೊಂಡ ಕಾರಣ ಹೂವು ಬರುವುದಿಲ್ಲ ಎಂದು ತಿಳಿದು 2 ಬಾರಿ ಔಷಧ ಸಿಂಪಡಣೆ ಮಾಡಿದರು. ಮಾರ್ಚ್ ಮೊದಲ ವಾರದಲ್ಲಿ ಬಿಸಿಲು ಹೆಚ್ಚಾದ ಕಾರಣ ಚಿಗುರಿದ ಮರಗಳಲ್ಲೂ ಶೇ.5 ಹೂ ಕಾಣಿಸಿಕೊಂಡಿರುವುದರಿಂದ ಆ ಹೂವಿನಲ್ಲಿ ಕಾಯಿ ಕಚ್ಚುತ್ತದೋ ಇಲ್ಲವೋ ಔಷಧವನ್ನಂತೂ ಸಿಂಪಡಣೆ ಮಾಡಲೇಬೇಕಾದ ಅನಿವಾರ್ಯತೆಯಲ್ಲಿ ರೈತರಿದ್ದಾರೆ.

ಒಂದೊಮ್ಮೆ ಔಷಧ ಸಿಂಪಡಣೆ ಮಾಡದಿದ್ದರೆ ಜಿಗಿಹುಳ ಕಾಣಿಸಿಕೊಂಡು ಈಗಾಗಲೆ ಎರಡು ಹಂತಗಳಲ್ಲಿ ಹೂವು ಬಿಟ್ಟು ಕಾಯಿ ಕಚ್ಚಿರುವ ಕಾಯಿಗಳಿಗೂ ಕಪ್ಪುಮಚ್ಚೆ ರೋಗ ಬರುವ ಸಾಧ್ಯತೆ ಇರುವುದರಿಂದ ರೈತರು ಮೂರನೇ ಹಂತದಲ್ಲಿ ಔಷಧ ಸಿಂಪಡಣೆ ಮಾಡಲು ಮುಂದಾಗಿದ್ದು, ಮತ್ತಷ್ಟು ನಷ್ಟ ಅನುಭವಿಸುವಂತಾಗಿದೆ.

ಈಗಿರುವ ಬಿಸಿಲಿನ ತಾಪ ಡಿಸೆಂಬರ್ ತಿಂಗಳಲ್ಲಿ ಇದ್ದಿದ್ದರೆ ಒಂದೇ ಹಂತದಲ್ಲಿ ಜನವರಿಯಲ್ಲಿ ಹೂವು ಕಾಣಿಸಿಕೊಳ್ಳುತ್ತಿತ್ತು. ಹವಾಮಾನ ವೈಪರೀತ್ಯದಿಂದ ಮೂರು ಹಂತಗಳಲ್ಲಿ ಹೂವು ಕಾಣಿಸಿಕೊಂಡಿದೆ. ಜತೆಗೆ ಮರಗಳಲ್ಲಿ ಚಿಗುರು ಕಾಣಿಸಿಕೊಂಡ ಕಾರಣ ಎರಡನೇ ಹಂತದ ಹೂವಿಗೆ ತೃಪ್ತಿ ಪಟ್ಟು ಸುಮ್ಮನಿದ್ದರು. ಮೂರನೇ ಹಂತದಲ್ಲಿ ಹೂವು ಕಾಣಿಸಿಕೊಳ್ಳುತ್ತಿರುವುದರಿಂದ ಔಷಧ ಸಿಂಪಡಣೆ ಮಾಡಲೇಬೇಕಾಗಿದೆ. ಇಲ್ಲದಿದ್ದರೆ ಇರುವ ಫಸಲನ್ನೂ ಕಳೆದುಕೊಳ್ಳಬೇಕಾಗುತ್ತದೆ.

ಮಾವಿನ ಮರಗಳಲ್ಲಿ ಚಿಗುರು ಕಾಣಿಸಿಕೊಂಡು ಮತ್ತೆ ಹೂವು ಬಿಟ್ಟಿರುವುದು ಇದೇ ಮೊದಲು. ಚಿಗುರುನಲ್ಲೂ ಹೂವು ಕಾಣಿಸಿಕೊಂಡಿರುವುದರಿಂದ ಇರುವ ಪಿಂದೆಯನ್ನು ಹಾಗೂ ಹೂವನ್ನು ಕಾಪಾಡಬೇಕಾಗಿದೆ. ಔಷಧ ಸಿಂಪಡಣೆ ಅನಿವಾರ್ಯ. ಈ ಬಗ್ಗೆ ಇಲಾಖೆಯವರು ರೈತರಲ್ಲಿ ಅರಿವು ಮೂಡಿಸಬೇಕು. ಚಿನ್ನಪ್ಪರೆಡ್ಡಿ, ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಈ ಹಿಂದೆ ಹೂವು ಬಿಟ್ಟು ಪಿಂದೆಯಾಗಿರುವ ಕಾಯಿಗಳ ರಕ್ಷಣೆ ಜತೆಗೆ ಈಗ ಬಿಟ್ಟಿರುವ ಹೂವನ್ನು ಉಳಿಸಿಕೊಳ್ಳಲು ಬೇಕಾಗುವ ಕ್ರಮಗಳ ಬಗ್ಗೆ ಇಲಾಖೆ ಅರಿವು ಮೂಡಿಸಬೇಕು. ಜಿಗಿಹುಳು ಹತೋಟಿಗೆ ಮತ್ತೊಮ್ಮೆ ಔಷಧ ಸಿಂಪಡಣೆ ಮಾಡಲು ರೈತರಿಗೆ ಹೊರೆಯಾಗುತ್ತಿದೆ. ಸರ್ಕಾರ ಉಚಿತವಾಗಿ ಔಷಧ ಒದಗಿಸಬೇಕು. ಚಿಕ್ಕವೆಂಕರೆಡ್ಡಿ, ರೈತ, ಹೊಸಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net