ಚಳಿ ವಾತಾವರಣ ಹೆಚ್ಚಾಗಿ ಉಷ್ಣಾಂಶವಿಲ್ಲದೆ ಹೂವು ಕಚ್ಚದ ಮಾವು: ಇಳುವರಿ ಕೊರತೆ, ಆದಾಯಕ್ಕೆ ಹೊಡೆತದ ಆತಂಕ

3 shrinivasapura 1a
Published on

ಶ್ರೀನಿವಾಸಪುರ: ಕೋಲಾರ ಜಿಲ್ಲೆಯಲ್ಲಿ ಚಳಿಯ ವಾತಾವರಣ ಹೆಚ್ಚಾಗಿರುವುದರಿಂದ ಗಿಡಗಳ ಮೇಲೆ ಬಿಸಿಲು ಬೀಳದೆ ಜನವರಿ ತಿಂಗಳು ಪ್ರಾರಂಭವಾದರೂ ಮಾವಿನ ಹೂವು ಕಾಣಿಸಿಕೊಂಡಿಲ್ಲ. ಈ ನಡುವೆ ರೈತರು ಗಿಡಗಳಿಗೆ ಉಷ್ಣಾಂಶ ನೀಡುವ ಔಷಧ ಸಿಂಪಡಣೆ ಮಾಡುತ್ತಿದ್ದಾರೆ.

ಕಳೆದ ವರ್ಷ ಜನವರಿಗೆ ಶೇ.30 ಗಿಡಗಳಲ್ಲಿ ಹೂವು ಕಾಣಿಸಿಕೊಂಡಿತ್ತು. ಆದರೆ ಈ ಬಾರಿ ಅಗತ್ಯವಾದಷ್ಟು ಮಳೆ ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಸಿಕ್ಕಿದ್ದು, ಉತ್ತಮ ಫಸಲು ಬರುವ ನಿರೀಕ್ಷೆ ಇದ್ದರೂ ಅಷ್ಟೊಂದು ಹೂವು ಕಾಣಿಸದಿರುವುದು ರೈತರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.

ಡಿಸೆಂಬರ್‌ನಲ್ಲಿ ಬಿಸಿಲು ಕಡಿಮೆ ಇದ್ದುದರಿಂದ ಜನವರಿಯಲ್ಲಿ ಹೂವು ಕಾಣಿಸಿಕೊಳ್ಳುವುದು ತಡವಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಹೂ ಬಿಡುವುದು 20 ದಿನ ವ್ಯತ್ಯಾಸ ಕಂಡುಬರುತ್ತಿದೆ. ಈಗಾಗಲೆ ಕೆಲ ಗಿಡಗಳಲ್ಲಿ ಮೊಗ್ಗು ಕಾಣಿಸಿಕೊಂಡಿದೆ. ಗಿಡಗಳಿಗೆ ಉಷ್ಣಾಂಶ ನೀಡಿದರೆ ಮೊಗ್ಗು ಈಚೆ ಬರುತ್ತದೆ ಎಂದು ರೈತರು ಔಷಧ ಸಿಂಪಡಣೆಗೆ ಮುಂದಾಗಿದ್ದಾರೆ.

ರೈತರಿಗೆ ಅರಿವು ಮೂಡಿಸಿ: ತೋಟಗಾರಿಕೆ ಇಲಾಖೆಯವರು ಯಾವ ಔಷಧದಿಂದ ಹೆಚ್ಚು ಪ್ರಯೋಜನವಾಗುತ್ತದೆ ಎಂಬುದರ ಕುರಿತು ಅರಿವು ಮೂಡಿಸಬೇಕು. ನಾನಾ ರೀತಿಯ ಕಂಪನಿಗಳ ಔಷಧ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ರೈತರು ಸಾವಿರಾರು ರೂಪಾಯಿ ನೀಡಿ ಗುಣಮಟ್ಟವಿಲ್ಲದ ಔಷಧ ಸಿಂಪಡಣೆ ಮಾಡುತ್ತಾರೆ. ಆದ್ದರಿಂದ ಅಧಿಕಾರಿಗಳು ಔಷಧಗಳ ಮಾಹಿತಿ ನೀಡಬೇಕೆಂಬುದು ರೈತರ ಮನವಿಯಾಗಿದೆ.

ಡಿಸೆಂಬರ್‌ನಲ್ಲಿ ಮೋಡ ಮುಚ್ಚಿದ ವಾತಾವರಣವಿದ್ದುದರಿಂದ ಈ ವರ್ಷ ಹೂವು ಕಾಣಿಸಿಕೊಳ್ಳಲು ತಡವಾಗಿದೆ. ಗಿಡಗಳಲ್ಲಿ ಹೂವು ಒಂದೇ ಸಮನಾಗಿ ಅರಳಲು ಉಷ್ಣಾಂಶದೊಂದಿಗೆ ಔಷಧ ಸಿಂಪಡಣೆ ಅವಶ್ಯಕ. ರೈತರು ತಜ್ಞರ ಸಲಹೆ ಪಡೆದು ಔಷಧ ಸಿಂಪಡಣೆ ಮಾಡಿದರೆ ಉತ್ತಮ ಸಲು ಬರುವ ನಿರೀಕ್ಷೆ ಇದೆ. ಚಿನ್ನಪ್ಪರೆಡ್ಡಿ, ನೀಲಟೂರು, ಜಿಲ್ಲಾ ಮಾವು ಬೆಳೆಗಾರರ ಸಂಘದ ಕಾರ್ಯದರ್ಶಿ

ರೈತರಿಗೆ ಅರಿವು ಕಾರ್ಯ: ಮಾವಿನ ಗಿಡಗಳಿಗೆ ರಾತ್ರಿ ವೇಳೆ ಶೇ.13ರಷ್ಟು ಉಷ್ಣಾಂಶ ಸಿಗಬೇಕು. ಆದರೆ ಅಷ್ಟು ಉಷ್ಣಾಂಶ ಸಿಗದಿರುವುದರಿಂದ ಹೂವು ಬರುವುದು ತಡವಾಗಿದೆ. 15 ದಿನದೊಳಗೆ ಹೂವು ಬರಲಿದೆ. ಈಗಾಗಲೆ ಬಾದಾಮಿ ಹಾಗೂ ರಾಜಗೀರದಲ್ಲಿ ಶೇ.10 ಮೊಗ್ಗು ಕಾಣಿಸಿಕೊಂಡಿದೆ. ಯಾವ ಔಷಧ ಸಿಂಪಡಣೆ ಮಾಡಬೇಕು ಎಂದು ಹೊಗಳಗೆರೆ ಮ್ಯಾಂಗೋ ಬೋರ್ಡ್‌ನಿಂದ ಅರಿವು ಮೂಡಿಸಲಾಗುತ್ತಿದೆ. ನಮ್ಮ ಇಲಾಖೆಯಿಂದಲೂ ಔಷಧಗಳ ಬಗ್ಗೆ ತಿಳಿವಳಿಕೆ ನೀಡಲಾಗುವುದು ಎಂದು ಶ್ರೀನಿವಾಸಪುರ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಬೈರಾರೆಡ್ಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net