

ಶಿವಮೊಗ್ಗ: ಭದ್ರಾವತಿ ಜನ್ನಾಪುರದಲ್ಲಿ ಕುಡಿಯಲು ನೀರು ಕೇಳುವ ನೆಪದಲ್ಲಿ ವೃದ್ಧೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ, ಹಣ ಮತ್ತು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದ ವ್ಯಕ್ತಿಗೆ ಭದ್ರಾವತಿಯ 4ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿದೆ. ದಂಡ ಕಟ್ಟಲು ವಿಫಲನಾದಲ್ಲಿ ಹೆಚ್ಚುವರಿಯಾಗಿ 6 ತಿಂಗಳು ಸಾದಾ ಕಾರವಾಸ ಶಿಕ್ಷೆ ವಿಧಿಸಿ ಆದೇಶಿಸಿದೆ.
ಭದ್ರಾವತಿ ತಾಲೂಕಿನ ಹಳೇ ಸಂಕ್ಲೀಪುರದ ಕುಮಾರ(42) ಶಿಕ್ಷೆಗೆ ಒಳಗಾದವ. 2015ರ ಜ.13ರಂದು ಜನ್ನಾಪುರದಲ್ಲಿ 60 ವರ್ಷ ವೃದ್ಧೆಯೊಬ್ಬರು ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ತೆರಳಿದ್ದ ಕುಮಾರ, ಕುಡಿಯಲು ನೀರು ಕೇಳಿದ್ದ. ವೃದ್ಧೆ ನೀರು ಅಡುಗೆ ಕೋಣೆಗೆ ತೆರಳುತ್ತಿದ್ದಂತೆ ಹಿಂಬದಿಯಿಂದ ಹೋಗಿ ಕೆಳಗೆ ಬೀಳಿಸಿ ಹಲ್ಲೆ ಮಾಡಿ ಮಾಂಗಲ್ಯ ಸರ, ಹಣ ಮತ್ತು ಮೊಬೈಲ್ ಅನ್ನು ಕಿತ್ತುಕೊಂಡು ಹೋಗಿದ್ದ.
ಈ ಬಗ್ಗೆ ಭದ್ರಾವತಿ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿಯಾಗಿದ್ದ ಭದ್ರಾವತಿ ನಗರ ವೃತ್ತದ ಸಿಪಿಐ ಪ್ರಭು ಸೂರಿನ್ ಅವರು ನ್ಯಾಯಾಲಯಕ್ಕೆ ದೋಷಾರೋಷಣಾ ಪಟ್ಟಿ ಸಲ್ಲಿಸಿದ್ದರು. ಶನಿವಾರ ವಿಚಾರಣೆ ನಡೆಸಿದ ನ್ಯಾಯಾಧೀಶ ಮಹಮ್ಮದ್‌ಅಲಿ ನಾಯಕ್ ಅವರು ಕುಮಾರನ ಮೇಲೆ ಆರೋಪ ಸಾಬೀತಾಗಿದ್ದರಿಂದ ಕಠಿಣ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರಿ ಸಹಾಯಕ ಅಭಿಯೋಜಕಿ ನೀಲಜ್ಯೋತಿ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.