

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಮಾಂಗಲ್ಯದ ವಿಷಯ ಪ್ರಸ್ತಾಪಿಸಿ ಮತ ಕೇಳುವ ಮಟ್ಟಕ್ಕಿಳಿದಿರುವುದು ಅಪಾಯಕಾರಿ ಹಾಗೂ ಕೀಳು ಮಟ್ಟದ ರಾಜಕೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಟೀಕಿಸಿದರು.
ಬಿಜೆಪಿ ಮಹಿಳೆಯರಿಗೆ ಗೌರವ ನೀಡುತ್ತದೆ ಎಂಬ ಮಾತು ಸುಳ್ಳಾಗಿದೆ. ಮೋದಿ ತಮ್ಮ ಸ್ಥಾನದ ಗೌರವ ಮರೆತು ಭಾಷಣ ಮಾಡಿದ್ದಾರೆ. ಪವಿತ್ರ ಮಾಂಗಲ್ಯ ಸರವೂ ಅವರ ಚುನಾವಣಾ ಪ್ರಚಾರದ ಸರಕಾಗಿರುವುದು ಬೇಸರದ ಸಂಗತಿ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಾತಿ, ಧರ್ಮ, ರಾಮ, ಹಣ ಮುಂತಾದ ಆಟಗಳೆಲ್ಲ ಈಗ ಮುಗಿದ ಅಧ್ಯಾಯ. ಬಿಜೆಪಿ ಆಡಳಿತದಲ್ಲಿಯೇ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಹೆಚ್ಚಾಗಿರುವುದನ್ನು ಅಂಕಿಅಂಶಗಳೇ ಹೇಳುತ್ತಿವೆ. ಅದರಲ್ಲೂ ಗುಜರಾತ್ ಮೊದಲ ಸ್ಥಾನದಲ್ಲಿದೆ ಎಂದರು.
ಬರ ಪರಿಹಾರ ವಿತರಣೆಗೆ ಸಂಬಂಧಿಸಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ. ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಿದ್ದ ಹಣವನ್ನು ಕೇಂದ್ರ ಸರ್ಕಾರ ನೀಡಲಿಲ್ಲ. ರಾಜ್ಯದ ಬಿಜೆಪಿ ಸಂಸದರು ಅದನ್ನು ಪ್ರಶ್ನಿಸಲೇ ಇಲ್ಲ ಎಂದು ದೂರಿದರು. ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಗೀತಾ ನನ್ನ ಸಹೋದರಿ ಇದ್ದಂತೆ ಎನ್ನುವ ಈಶ್ವರಪ್ಪ ಮತ್ತೊಂದು ಕಡೆ ಗೀತಾ ಬಗ್ಗೆ ಕೀಳಾಗಿ ಮಾತನಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.