ಹೊನ್ನಾವರ ಬಳಿಕ ಬಂಟ್ವಾಳದ ಕಾರು ಚಾಲಕನಿಗೆ ಹಲ್ಲೆ; ಪೊಲೀಸರ ಸಕಾಲಿಕ ಪ್ರವೇಶದಿಂದ ಉಳಿಯಿತು ಪ್ರಾಣ

IMG-20220822-WA0003
Published on

ಮಂಗಳೂರು: ಬಾಡಿಗೆಗೆಂದು ಕಾರು ಗೊತ್ತುಪಡಿಸಿ, ಮಾರ್ಗ ಮಧ್ಯದಲ್ಲಿ ಯಾವುದಾರರೂ ನಿರ್ಜನ ಪ್ರದೇಶದಲ್ಲಿ ಚಾಲಕನಿಗೆ ಹಲ್ಲೆ ಮಾಡಿ, ಕಾರು ಸಮೇತ ಪರಾರಿಯಾಗುವ ಪ್ರಕರಣಗಳು ಎಲ್ಲ ಕಡೆಗಳಲ್ಲಿ ನಡೆಯುತ್ತಿದ್ದು, ಚಾಲಕರು ಈ ಕುರಿತಂತೆ ಎಚ್ಚರಿಕೆಯಿಂದ ಇರಬೇಕು ಎಂದು ದ.ಕ ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ಅಧ್ಯಕ್ಷ ದಿನೇಶ್ ಕುಂಪಲ ಎಂ. ಮನವಿ ಮಾಡಿದ್ದಾರೆ.
ಈ ಕುರಿತಂತೆ ಸೋಮವಾರ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಟ್ವಾಳ ನಿವಾಸಿ, ಅಸೋಸಿಯೇಶನ್ ಸದಸ್ಯ ಅಬ್ದುಲ್ ರಹಿಮಾನ್ ಅವರನ್ನು ಆ.20ರಂದು ಮಂಗಳೂರಿನ ಲೇಡಿಗೋಷನ್ ಬಳಿಯ ಟ್ಯಾಕ್ಸಿ ಸ್ಟಾೃಂಡ್‌ನಿಂದ ಬಾಡಿಗೆಗೆಂದು ಗೊತ್ತು ಮಾಡಿ ಹಲ್ಲೆ ಮಾಡಿರುವ ಪ್ರಕರಣದ ಕುರಿತಂತೆ ವಿವರ ನೀಡಿದರು.
ಮೂವರು ಅಪರಿಚಿತರು ಸುಬ್ರಹ್ಮಣ್ಯಕ್ಕೆ ಬಾಡಿಗೆಗೆಂದು ಕಾರನ್ನು ಗೊತ್ತುಮಾಡಿದ್ದು, ಅದರಂತೆ ಬಾಡಿಗೆ ನಿಗದಿ ಮಾಡಿ ಹೊರಟಿದ್ದಾರೆ. ಪಡೀಲ್ ಬಳಿಗೆ ತಲುಪುತ್ತಿದ್ದಂತೆ ಸುಬ್ರಹ್ಮಣ್ಯದ ಬದಲು ಮುರುಡೇಶ್ವರಕ್ಕೆ ತೆರಳಲು ಸೂಚಿಸಿದ್ದು, ಮೊದಲೇ ಮಾತನಾಡಿದಂತೆ ಕಿ.ಮೀ. ಇಷ್ಟು ಬಾಡಿಗೆ ನೀಡುವುದಾಗಿ ಅಪರಿಚಿತರು ತಿಳಿಸಿದ್ದಾರೆ. ಮಧ್ಯಾಹ್ನ ಮುರುಡೇಶ್ವರ ತಲುಪಿದ್ದು, ಅಲ್ಲಿಂದ ಹೊನ್ನಾವರಕ್ಕೆ ಹೋಗುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಅನುಮಾನ ಬಂದು ಕಾರನ್ನು ನಿಲ್ಲಿಸುವ ಸಂದರ್ಭ ಪ್ರಯಾಣಿಕರು ಚೂರಿಯಿಂದ ಹಲ್ಲೆ ಮಾಡಿದ್ದಾರೆ.
ಈ ಸಂದರ್ಭ ಅದೇ ದಾರಿಯಲ್ಲಿ ಗಸ್ತು ತೆರಳುತ್ತಿದ್ದ ಮಂಕಿ ಠಾಣಾ ಪೊಲೀಸರು ಬಂದು ರೆಹಮಾನ್ ಅವರನ್ನು ರಕ್ಷಿಸಿದ್ದಾರೆ. ಈ ವೇಳೆ ಟ್ಯಾಕ್ಸಿಯಲ್ಲಿದ್ದ ಮೂವರು ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಸಾರ್ವಜನಿಕರು ಹಾಗೂ ಪೊಲೀಸರು ಅವರನ್ನು ಬೆನ್ನಟ್ಟಿ ಹೊಡಿದು ಪ್ರಕರಣ ದಾಖಲಿಸಿದ್ದಾರೆ. ಬಂಧಿತರು ಉತ್ತರ ಕರ್ನಾಟಕ ಕಡೆಯವರಾಗಿದ್ದು, ಸಕಾಲದಲ್ಲಿ ಪೊಲೀಸರು ಬಂದ ಕಾರಣ ರೆಹಮಾನ್ ಅವರ ಪ್ರಾಣ ಉಳಿದಿದೆ ಎಂದರು.
ಇಂತಹ ಪ್ರಕರಣಗಳು ಈ ಹಿಂದೆಯೂ ಸಾಕಷ್ಟು ನಡೆದಿದ್ದು, ಒಂದು ಕಡೆಗೆ ಬಾಡಿಗೆ ಗೊತ್ತುಪಡಿಸಿ ಇನ್ನೊಂದು ಕಡೆಗೆ ತೆರಳಲು ನಿರ್ದೇಶಿಸುವ ಪ್ರಯಾಣಿಕರ ಬಗ್ಗೆ ಚಾಲಕರು ಎಚ್ಚರಿಕೆ ವಹಿಸಬೇಕು. ತಾವು ಇಂತಹ ಕಡೆಗೆ ತೆರಳುತ್ತಿರುವ ಕುರಿತಂತೆ ತಮ್ಮ ಸ್ಟಾೃಂಡ್‌ನ ಇತರ ಚಾಲಕರಿಗೆ ಮಾಹಿತಿ ನೀಡುವುದು ಉತ್ತಮ. ಕೆಲವೊಂದು ಪ್ರಕರಣಗಳಲ್ಲಿ ದುಷ್ಕರ್ಮಿಗಳು ಟ್ಯಾಕ್ಸಿಗಳನ್ನು ಬಾಡಿಗೆ ಗೊತ್ತುಪಡಿಸಿ ಅರ್ಧ ದಾರಿಯಲ್ಲಿ ತಮ್ಮ ಅಕ್ರಮಗಳಿಗೆ ಬಳಸಿಕೊಂಡು ಬಳಿಕ ಅಮಾಯಕ ಚಾಲಕರು ಜೈಲು ಶಿಕ್ಷೆ ಅನುಭವಿಸಬೇಕಾದ ಪ್ರಮೇಯವೂ ನಮ್ಮಲ್ಲಿ ನಡೆದಿದೆ ಎಂದು ಅವರು ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಆನಂದ ಕೆ., ಉಪಾಧ್ಯಕ್ಷ ಹರೀಶ್ ಶೆಟ್ಟಿ, ಕೋಶಾಧಿಕಾರಿ ಸುರೇಶ್ ಸಾಲಿಯಾನ್, ಸಂತ್ರಸ್ತ ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net