ಮಂಗಳೂರು- ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ಆರಂಭಕ್ಕೆ ಸಂಸದ ಚೌಟ ಒತ್ತಾಯ

RAIL
Published on

ಮಂಗಳೂರು: ಮಂಗಳೂರು- ಸುಬ್ರಹ್ಮಣ್ಯ ನಡುವೆ ಪ್ಯಾಸೆಂಜರ್ ರೈಲು ಆರಂಭಿಸಬೇಕೆಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಂಸತ್ತಿನಲ್ಲಿ ಒತ್ತಾಯಿಸಿದ್ದಾರೆ.

ಲೋಕಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಮಂಗಳೂರು- ಸುಬ್ರಹ್ಮಣ್ಯ ನಡುವೆ ಮೀಟರ್ ಗೇಜ್ ಹಳಿ ಇದ್ದಾಗ ಪ್ಯಾಸೆಂಜರ್ ರೈಲು ಓಡಾಟವಿತ್ತು. ಬ್ರಾಡ್ ಗೇಜ್ ಹಳಿ ಮಾಡುವ ಸಲುವಾಗಿ 2005ರಲ್ಲಿ ಈ ರೈಲಿನ ಸಂಚಾರ ನಿಲ್ಲಿಸಲಾಗಿತ್ತು. ನಂತರದಲ್ಲಿ ಬ್ರಾಡ್ ಗೇಜ್ ಹಳಿಯಾಗಿ ಪರಿವರ್ತನೆ ಮಾಡಲಾಗಿದೆ. ಅಂದು ಓಡುತ್ತಿದ್ದ ಪ್ಯಾಸೆಂಜರ್ ರೈಲು ಮಂಗಳೂರಿನಿಂದ ಕಬಕ- ಪುತ್ತೂರು ನಡುವೆ ಓಡಾಟ ನಡೆಸುತ್ತಿದ್ದು, ಅದನ್ನು ಸುಬ್ರಹ್ಮಣ್ಯದವರೆಗೆ ವಿಸ್ತರಿಸಬೇಕು ಎಂದರು.

*ಜಿಲ್ಲಾ ಸಂಚಾರದ ಏಕೈಕ ಪ್ಯಾಸೆಂಜರ್ ರೈಲು

ಮಂಗಳೂರು ಸುಬ್ರಹ್ಮಣ್ಯ ಮಧ್ಯೆ ರೈಲು ಓಡಾಟವಾದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆ, ಕಾಲೇಜಿಗೆ ಹೋಗುವವರಿಗೆ ಅನುಕೂಲವಾಗಲಿದೆ. ಗ್ರಾಮಾಂತರ ಪ್ರದೇಶವಾದ ಸುಳ್ಯದಿಂದ ಮಂಗಳೂರಿಗೆ ಪ್ರತಿದಿನ ಪ್ರಯಾಣಿಸುವವರಿದ್ದಾರೆ. ಅವರಿಗೂ ಇದರಿಂದ ಉಪಯುಕ್ತ. ಇದು ಸೌತ್ ವೆಸ್ಟರ್ನ್ ರೈಲ್ವೇ ವಿಭಾಗದಲ್ಲಿದ್ದು, ನಮ್ಮ ಜಿಲ್ಲೆಯ ಒಳಗೆ ಸಂಚರಿಸುವ ಏಕೈಕ ಪ್ಯಾಸೆಂಜರ್ ರೈಲಾಗಿದೆ. ಜನಸಾಮಾನ್ಯರ ಹಿತದೃಷ್ಟಿಯಿಂದ ಈ ರೈಲನ್ನು ಸುಬ್ರಹ್ಮಣ್ಯದ ವರೆಗೂ ವಿಸ್ತರಣೆ ಮಾಡಬೇಕು ಎಂದು ಸಂಸದ ಚೌಟ ಅವರು ಕೇಂದ್ರ ರೈಲ್ವೇ ಸಚಿವರಲ್ಲಿ ಮನವಿ ಮಾಡಿದ್ದಾರೆ.

-----------------------

ರೈಲ್ವೆ ಸಮಸ್ಯೆಗಳನ್ನು ಪರಿಹರಿಸಲು ಸಿದ್ಧ

ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಸಂಸತ್ತಿನಲ್ಲಿ ಮಾಡಿದ ಮನವಿಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಸೇನೆಯಿಂದ ನಿವೃತ್ತಿ ಪಡೆದು ಸಂಸದರಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಬಗ್ಗೆ ಗೌರವ ಹೊಂದಿದ್ದು, ರೈಲ್ವೇ ವಿಚಾರಗಳ ಬಗ್ಗೆ ಯಾವುದೇ ಮನವಿಯಿದ್ದರೂ ನನ್ನ ಕಚೇರಿಗೆ ಬಂದು ವೈಯಕ್ತಿಕವಾಗಿ ಚರ್ಚಿಸಬಹುದು. ರೈಲ್ಚೆ ಇಲಾಖೆಗೆ ಸಂಭಂಧಿಸಿದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net