ಸ್ಮಾರ್ಟ್‌ಸಿಟಿಗೆ ಶೌಚಗೃಹ ಸಮಸ್ಯೆ ಕಪ್ಪು ಚುಕ್ಕೆ

Mng-mar17-e toilet1 (1)
Published on

ಮಂಗಳೂರು: ಸ್ಮಾರ್ಟ್ ಸಿಟಿಯಾಗುತ್ತಿರುವ ಮಂಗಳೂರು ನಗರದ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಶೌಚಗೃಹ ಇಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ. ಮಹಾನಗರ ಪಾಲಿಕೆ ಕಚೇರಿ ಎದುರು ಹಾಗೂ ಜಪ್ಪಿನಮೊಗರಿನಲ್ಲಿರುವ ಇ-ಟಾಯ್ಲೆಟ್ ನಿರ್ವಹಣೆ ಇಲ್ಲದೆ ಬಳಕೆಯೇ ಆಗುತ್ತಿಲ್ಲ.


ಸ್ಮಾರ್ಟ್ ಸಿಟಿ ಯೋಜನೆಯಡಿ ಅನಗತ್ಯ ಕಾಮಗಾರಿಗಳಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವಾಗ, ನಗರಕ್ಕೆ ಅವಶ್ಯ ಸಾರ್ವಜನಿಕ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಆಡಳಿತ ವ್ಯವಸ್ಥೆ ಮುಂದಾಗದೆ ಇರುವುದು ದುರಂತ. ಇರುವ ಸುಸಜ್ಜಿತ ಕಾಂಕ್ರೀಟ್ ರಸ್ತೆ ಅಗೆದು ಮತ್ತೆ ಕಾಂಕ್ರೀಟ್ ಹಾಕುವ ಕೆಲಸಗಳ ಮಧ್ಯೆ ಜನರ ಅಗತ್ಯಗಳನ್ನು ಈಡೇರಿಸುವ ಕಡೆಗೂ ಗಮನ ಹರಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಜಿ.ಕೆ.ಭಟ್ ಆಗ್ರಹಿಸಿದ್ದಾರೆ.


ಅಗತ್ಯವಿರುವಲ್ಲಿ ಬೇಕಿದೆ ಶೌಚಗೃಹ
ಮಂಗಳೂರಿನ ಹೃದಯ ಭಾಗ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶೌಚಗೃಹ ಇದೆ, ಆದರೆ ಹಲವು ವರ್ಷಗಳಿಂದ ಬೀಗ ಹಾಕಲಾಗಿದೆ. ಕಂಕನಾಡಿ, ಪಂಪ್‌ವೆಲ್ ಮೊದಲಾದ ಕಡೆ ಬಸ್ ತಂಗುದಾಣಗಳಲ್ಲಿ ಸಾರ್ವಜನಿಕ ಶೌಚಗೃಹ ಇಲ್ಲ. ಇರುವ ಶೌಚಗೃಹ ನಿರ್ವಹಣೆ ಸಮಸ್ಯೆಯಿಂದ ಬಾಗಿಲು ಹಾಕಿ ಮೂರು ವರ್ಷಗಳೇ ಕಳೆದಿವೆ. ಗ್ರಾಮೀಣ ಭಾಗದಿಂದ ಬರುವ ಸಾರ್ವಜನಿಕರು, ಮಹಿಳೆಯರು ಶೌಚಗೃಹಕ್ಕೆ ತೆರಳಲು ಪರದಾಡುವ ಸ್ಥಿತಿಯಿದೆ. ಸ್ಥಳೀಯ ಪ್ರದೇಶಗಳಿಗೆ ಹೋಗುವ ಹಾಗೂ ದೂರದ ಬೆಂಗಳೂರು, ಕೇರಳ, ಪುತ್ತೂರು ಕಡೆಗೆ ಹೋಗುವ ಪ್ರಯಾಣಿಕರು ಬಸ್ ಹತ್ತಲು ಅಂಬೇಡ್ಕರ್ ವೃತ್ತದಲ್ಲಿರುವ ಬಸ್ ನಿಲ್ದಾಣ ಬಳಸುತ್ತಾರೆ. ಬೆಳಗ್ಗೆ 6ರಿಂದ ರಾತ್ರಿ 10ರ ತನಕ ಇಲ್ಲಿ ಪ್ರಯಾಣಿಕರು ತುಂಬಿರುತ್ತಾರೆ. ಇಲ್ಲಿ ಶೌಚಗೃಹದ ವ್ಯವಸ್ಥೆ ಕಲ್ಪಿಸದೆ ಇರುವುದು ಸಮಸ್ಯೆಗೆ ಎಡೆ ಮಾಡಿಕೊಟ್ಟಿದೆ. ಬೆಂಗಳೂರು, ಕೇರಳ ಕಡೆಯಿಂದ ಬಂದು ಇತರ ಕಡೆಗಳಿಗೆ ಹೋಗುವವರು ಬಸ್ ಇಳಿದು ಇನ್ನೊಂದು ಬಸ್ ಹತ್ತಲು ಆಯ್ಕೆ ಮಾಡುವುದು ಅಂಬೇಡ್ಕರ್ ವೃತ್ತದಲ್ಲಿರುವ ಬಸ್ ತಂಗುದಾಣವನ್ನು. ದೂರದಿಂದ ಬಸ್ ಪ್ರಯಾಣ ಮಾಡಿ ಬಂದವರು ಇನ್ನೊಂದು ಬಸ್ ಹತ್ತುವ ಮುನ್ನ ಶೌಚಗೃಹಕ್ಕೆ ಹೋಗುವುದು ಸಾಮಾನ್ಯ. ಆದರೆ ಇಲ್ಲಿ ಶೌಚಗೃಹವಿದ್ದರೂ, ಬೀಗ ಜಡಿದಿರುವುದರಿಂದ ಸಾರ್ವಜನಿಕರ ಬಳಕೆಗೆ ಲಭ್ಯವಾಗುತ್ತಿಲ್ಲ. ಪಂಪ್‌ವೆಲ್‌ನಲ್ಲಿರುವ ಶೌಚಗೃಹಕ್ಕೂ ಬೀಗ ಜಡಿಯಲಾಗಿದೆ. ಜಪ್ಪಿನಮೊಗರಿನಲ್ಲಿ ತಂದು ಹಾಕಿರುವ ಎರಡು ಇ-ಶೌಚಗೃಹ ಇದುವರೆಗೆ ಬಳಕೆಯೇ ಆಗಿಲ್ಲ. ಕದ್ರಿ ಮೈದಾನದ ಬಳಿ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದ ಶೌಚಗೃಹ ಕೂಡ ಸಾರ್ವಜನಿಕರ ಬಳಕೆಗೆ ತೆರೆದು ಕೊಂಡಿಲ್ಲ. ವೆಲೆನ್ಸಿಯಾದಲ್ಲಿರುವ ಶೌಚಗೃಹ ನಿರ್ವಹಣೆ ಇಲ್ಲದೆ ಮೂಗು ಮುಚ್ಚಿಕೊಂಡು ಉಪಯೋಗಿಸಬೇಕಾದ ಸ್ಥಿತಿ ಇದೆ.

ಮಂಗಳೂರು ನಗರ ರಸ್ತೆ ಕಾಂಕ್ರೀಟು, ಫುಟ್‌ಪಾತ್ ನಿರ್ಮಾಣ ಮಾಡಿದರೆ ಮಾತ್ರ ಸ್ಮಾರ್ಟ್ ಸಿಟಿಯಾಗುವುದಿಲ್ಲ. ಶೌಚಗೃಹ, ಕುಡಿಯುವ ನೀರು, ಬಸ್ ತಂಗುದಾಣ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸುವುದು ಅವಶ್ಯ. ಹಲವು ಬಾರಿ ಮನವಿ ನೀಡಿ ಒತ್ತಾಯಿಸಿದರೂ, ಸಾರ್ವಜನಿಕ ಸಮಸ್ಯೆಗಳಿಗೆ ಜನಪ್ರತಿನಿಧಿಗಳು, ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ.
ಜಿ.ಕೆ.ಭಟ್
ಸಾಮಾಜಿಕ ಕಾರ್ಯಕರ್ತರು

ಮಂಗಳೂರು ನಗರದಲ್ಲಿ ಸಾರ್ವಜನಿಕ ಶೌಚಗೃಹದ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ನಿರ್ವಹಣೆ ಸಮಸ್ಯೆಯಿಂದ ಇರುವ ಶೌಚಗೃಹಗಳು ಹಾಗೆಯೇ ಇವೆ. ಈ ಬಗ್ಗೆ ಗಮನ ವಹಿಸಿ ಶೀಘ್ರ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು.
ಜಯಾನಂದ ಅಂಚನ್
ಮೇಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net