ಮಂಗಳೂರು ಹೂಡಿಕೆ ನೆಪದಲ್ಲಿ 42.50 ಲಕ್ಷ ರೂ. ವಂಚನೆ

Fruad
Published on

ಮಂಗಳೂರು: ವಾಟ್ಸಾಪ್‌ಗೆ ಅಪರಿಚಿತ ಸಂಖ್ಯೆಯಿಂದ ಬಂದ ಹೂಡಿಕೆ ಕುರಿತ ಲಿಂಕ್ ಕ್ಲಿಕ್ ಮಾಡಿ ವ್ಯಕ್ತಿಯೊಬ್ಬರು 42.50 ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರ ಮೊಬೈಲ್ ನ ವಾಟ್ಸಾಪ್‌ಗೆ ಜು.13ರಂದು ಪ್ರಿಯಾ ಅಗರ್‌ವಾಲ್ ಎನ್ನುವ ಅಪರಿಚಿತ ಹೆಸರಿನಲ್ಲಿ ಹೂಡಿಕೆ ಬಗ್ಗೆ ಮಾಹಿತಿ ಇರುವ ಲಿಂಕ್ ಬಂದಿದೆ. ಅದನ್ನು ಕ್ಲಿಕ್ ಮಾಡಿ ನೋಡಿದ್ದಾರೆ. ಬಳಿಕ ಇನ್ನೊಂದು ಲಿಂಕ್ ಕಳುಹಿಸಿ ಆ್ಯಪ್‌ನಲ್ಲಿ ನೋಂದಾಯಿಸಿಕೊಳ್ಳುವಂತೆ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು ನಂಬರ್ ಕೂಡಾ ಕಳುಹಿಸಿಕೊಟ್ಟಿದ್ದಾರೆ. ಅವರ ಹೇಳಿದಂತೆ ದೂರುದಾರರು ಆ ಲಿಂಕ್‌ಗೆ ವೈಯಕ್ತಿಕ ಮಾಹಿತಿ ಅಪ್‌ಲೋಡ್ ಮಾಡಿ ನೋಂದಾಯಿಸಿಕೊಂಡಿದ್ದಾರೆ.

ಹೆಚ್ಚು ಲಾಭಗಳಿಸುವ ಆಮಿಷ ಒಡ್ಡಿದಂತೆ ಜು.24ರಿಂದ ಸೆ.19ರ ವರೆಗೆ ತನಕ ವಿವಿಧ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ 42.50 ಲಕ್ಷ ರೂ. ಹಣವನ್ನು ವರ್ಗಾವಣೆ ಮಾಡಿದ್ದಾರೆ. ಅನಂತರ ಇನ್ನೊಂದು ಲಿಂಕ್ ಕಳುಹಿಸಿದ್ದು, ಸೆ.20ರಂದು 12 ಲಕ್ಷ ರೂ. ಟ್ಯಾಕ್ಸ್ ಪಾವತಿಸುವಂತೆ ಒತ್ತಾಯಿಸಿದಾಗ ಅನುಮಾನ ಬಂದು ವಿಚಾರಿಸಿದಾಗ ಮೋಸ ಹೋಗಿರುವುದು ತಿಳಿದು ಬಂದಿದೆ. ಹಣ ಹೂಡಿಕೆ ನೆಪದಲ್ಲಿ ಅಪರಿಚಿತ ವ್ಯಕ್ತಿಗಳು ವಂಚನೆ ಮಾಡಿದ್ದು, ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net