

ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್‌ಟಿಎಸ್‌ಸಿ-2 ಪೊಕ್ಸೋ ವಿಶೇಷ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗೆ 20 ವರ್ಷಗಳ ಕಠಿನ ಶಿಕ್ಷೆ ಮತ್ತು 55,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಧರ್ಮಸ್ಥಳ ಗ್ರಾಮ ಕಲ್ಕಜೆ ದೊಂಡೋಲೆಯ ಕೆ.ಎಸ್.ಕೇಶವ ಪೂಜಾರಿ(43) ಶಿಕ್ಷೆಗೊಳಗಾದವನು.
ಪ್ರಕರಣದ ವಿವರ:
ಅಪರಾಧಿ ಕೇಶವ ಪೂಜಾರಿ 15 ವರ್ಷದ ಬಾಲಕಿ ಆಕೆಯ ಮನೆಯಲ್ಲಿ ಒಬ್ಬಳೇ ಇರುವಾಗ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ. ಅಲ್ಲದೆ ಜೀವಬೆದರಿಕೆ ಹಾಕುತ್ತಿದ್ದ. 2023ರ ನವೆಂಬರ್‌ನಲ್ಲಿ ಬಾಲಕಿಯ ಕಾಲಿನಲ್ಲಿ ಊತ ಕಂಡುಬಂದಿದ್ದು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಕೆ ಐದೂವರೆ ತಿಂಗಳ ಗರ್ಭಿಣಿ ಎಂಬುದಾಗಿ ವೈದ್ಯರು ತಿಳಿಸಿದ್ದರು. ಆರೋಪಿ ಹೆದರಿಸಿದ್ದ ಹಿನ್ನೆಲೆಯಲ್ಲಿ ಬಾಲಕಿ ಬೇರೊಬ್ಬ ಕಾಲ್ಪನಿಕ ವ್ಯಕ್ತಿಯ ಹೆಸರು ಹೇಳಿದ್ದಳು. ಆದರೆ ಬಾಲಕಿ ಹೇಳಿದ ಹೆಸರಿನ ವ್ಯಕ್ತಿ ಬಾಲಕಿ ಹೇಳಿದ ಸ್ಥಳದಲ್ಲಿ ಇಲ್ಲದೇ ಇರುವುದರಿಂದ ಆಕೆಯನ್ನು ಆಪ್ತ ಸಮಾಲೋಚನೆಗೆ ಒಳಪಡಿಸಿ ಧೈರ್ಯ ತುಂಬಿ ಪುನಃ ವಿಚಾರಿಸಿದಾಗ ಕೇಶವ ಪೂಜಾರಿ ಕೃತ್ಯ ಎಸಗಿರುವ ಬಗ್ಗೆ ತಿಳಿಸಿದ್ದಳು. ಅದರಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡಿಎನ್‌ಎ ಪರೀಕ್ಷೆಯಲ್ಲಿ ಕೇಶವ ಪೂಜಾರಿಯೇ ಬಾಲಕಿಯ ಭ್ರೂಣದ ಜೈವಿಕ ತಂದೆ ಎಂಬುದು ದೃಢಪಟ್ಟಿತ್ತು.
ಧರ್ಮಸ್ಥಳ ಪೊಲೀಸ್ ನಿರೀಕ್ಷಕ ನಾಗೇಶ್ ಕೆ. ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಅಭಿಯೋಜನೆ ಪರ 16 ಸಾಕ್ಷಿದಾರರನ್ನು ವಿಚಾರಿಸಿ 33 ದಾಖಲೆಗಳನ್ನು ಗುರುತಿಸಲಾಗಿದೆ. ನ್ಯಾಯಾಧೀಶರಾದ ಮಾನು ಕೆ.ಎಸ್. ಅವರು ಈ ಪ್ರಕರಣದ ಸಾಕ್ಷೃ, ದಾಖಲೆಗಳು ಹಾಗೂ ಪೂರಕ ಸಾಕ್ಷೃವನ್ನು ಪರಿಗಣಿಸಿ ಹಾಗೂ ವಾದ ಪ್ರತಿ ವಾದವನ್ನು ಆಲಿಸಿ ಕೇಶವ ಪೂಜಾರಿ ವಿರುದ್ಧ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ ಜ.28ರಂದು ಭಾರತೀಯ ದಂಡ ಸಂಹಿತೆಯ ಕಲಂ 376(2)(ಎನ್), 376(3) ಮತ್ತು ಕಲಂ 6 ಪೊಕ್ಸೋ ಕಾಯಿದೆಯಂತೆ 20 ವರ್ಷಗಳ ಕಠಿನ ಶಿಕ್ಷೆ ಮತ್ತು 50,000 ರೂ. ದಂಡ ವಿಧಿಸಿದ್ದಾರೆ. ಜೀವ ಬೆದರಿಕೆ ಹಾಕಿರುವುದಕ್ಕೆ ಭಾರತೀಯ ದಂಡ ಸಂಹಿತೆಯ ಕಲಂ 506ರ ಪ್ರಕಾರ 3 ತಿಂಗಳ ಸಾದಾ ಶಿಕ್ಷೆ ಮತ್ತು 5,000 ರೂ. ದಂಡ ವಿಧಿಸಿದ್ದಾರೆ.
ದಂಡದ ಒಟ್ಟು ಹಣವಾದ 55,000 ರೂ.ಗಳನ್ನು ನೊಂದ ಬಾಲಕಿಗೆ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ಅಲ್ಲದೆ ದಂಡ ಪ್ರಕ್ರಿಯೆ ಸಂಹಿತೆಯ ಕಲಂ 357(ಎ) ಪ್ರಕಾರ ಮತ್ತು ಸಂತ್ರಸ್ಥರ ಪರಿಹಾರ ಯೋಜನೆ ಅಡಿಯಲ್ಲಿ ನೊಂದ ಬಾಲಕಿಗೆ ಹೆಚ್ಚುವರಿಯಾಗಿ 6,45,000 ರೂ. ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ.ಬದರಿನಾಥ ನಾಯರಿ ಅವರು ಸಾಕ್ಷಿದಾರರನ್ನು ವಿಚಾರಿಸಿ ವಾದ ಮಂಡಿಸಿದ್ದರು.