ಫೆ.21ರಂದು ಒಲವಿನ ಪಯಣ ಚಿತ್ರ ರಾಜ್ಯದಾದ್ಯಂತ ಬಿಡುಗಡೆ

film
Published on

ಮಂಗಳೂರು: ಮುಳಗುಂದ ಕ್ರಿಯೇಷನ್ಸ್‌ನಡಿ ನಿರ್ಮಾಣಗೊಂಡ ಒಲವಿನ ಪಯಣ ಕನ್ನಡ ಚಿತ್ರ ಫೆ.21ರಂದು ರಾಜ್ಯದಾದ್ಯಂತ ಬಿಡುಗಡೆಗೊಳ್ಳಲಿದೆ.

ಈಗಾಗಲೇ ವಿರಾಜಪೇಟೆ ಹಾಗೂ ಬೆಂಗಳೂರುನಲ್ಲಿ 25 ದಿನಗಳ ಚಿತ್ರೀಕರಣ ಪೂರ್ಣಗೊಳಿಸಿದ್ದು, ಬಿಡುಗಡೆಗೆ ಪೂರ್ವ ಸಿದ್ಧತೆ ನಡೆಯುತ್ತಿದೆ ಎಂದು ಚಿತ್ರದ ನಿರ್ದೇಶಕ ಕಿಶನ್ ಬಲ್ನಾಡ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಒಲವಿನ ಪಯಣ ಒಂದು ಹಳ್ಳಿಯ ಮಧ್ಯಮವರ್ಗದ ಕುಟುಂಬದ ಯುವಕನ ಬದುಕಿನ ಪಯಣದ ಕಥೆಯಾಗಿದ್ದು ಗೊತ್ತು ಗುರಿಯಿಲ್ಲದೆ ಪ್ರೀತಿ ಪ್ರೇಮ ಎಂದು ಓಡಾಡುತ್ತಿರುವ ಹುಡುಗನೊಬ್ಬ ತಾನು ಪ್ರೀತಿಸಿದ ಶ್ರೀ ಮಂತ ಹುಡುಗಿಯನ್ನು ಬಾಳಸಂಗತಿಯಾಗಿ ಪಡೆಯಲು ಅವಳ ತಂದೆಗೆ ಸವಾಲು ಹಾಕಿ ಕೊನೆಗೆ ಆ ಸವಾಲನ್ನು ಗೆದ್ದು ಅವಳನ್ನು ಮದುವೆಯಾಗಿ ಸುಖವಾಗಿ ಜೀವನ ಸಾಗಿಸಬೇಕೆನ್ನುವಾಗ ಅವನ ಜೀವನದಲ್ಲಿ ವಿಧಿಯಾಟದಿಂದ ನಡೆಯುವ ತಿರುವುಗಳು ಅವನ ಜೀವನವನ್ನೇ ಬದಲಾಯಿಸಿ ಬಿಡುತ್ತವೆ ಎಂಬುವುದು ಕಥೆ. ಅದರಿಂದ ಅವನು ಹೊರಬರಲು ಪಡುವ ಪರಿಪಾಟಲು ಈ ಕಥೆ. ಇಲ್ಲೊಂದು ನವಿರಾದ ಪ್ರೇಮಕತೆಯಿದ್ದು ಪ್ರೀತಿಸಿದವರನ್ನು ಕಳೆದುಕೊಳ್ಳುವ ನೋವಿದೆ... ಕಷ್ಟದಲ್ಲಿದ್ದಾಗ ನೆರವಾಗುವ ಸ್ನೇಹಿತರ ಬಳಗವಿದೆ.. ಪ್ರೀತಿಗಾಗಿ ಎಲ್ಲವನ್ನು ತ್ಯಾಗ ಮಾಡುವ ಹಠವಿದೆ.. ರಕ್ತಸಂಬಂಧದದ ನಂಟಿದೆ... ಬದುಕು ನಾವಂದುಕೊಂಡಂತೆ ಇಲ್ಲ ಎಂಬಷ್ಟು ತಿರುವುಗಳಿವೆ.. ಕೊನೆಗೆ ಆ ಯುವಕನ ಜೀವನದಲ್ಲಿ ಏನಾಯಿತು ಎನ್ನುವುದೇ ಕಥೆಯ ಸಾರಾಂಶವಾಗಿದೆ. ಮೂರು ಹಾಡುಗಳಿವೆ. ಕುಟುಂಬ ಸದಸ್ಯರೆಲ್ಲರೂ ಜತೆಗೆ ಕುಳಿತು ನೋಡಬಹುದಾದ ಚಿತ್ರ ಎಂದವರು ಹೇಳಿದರು.

ನಾಯಕ ಸುನಿಲ್, ನಿರ್ಮಾಪಕ ನಾಗರಾಜ್ ಎಸ್. ಮುಳಗುಂದ, ನಾಯಕಿಯರಾದ ಕುಶಿ, ಪ್ರಿಯಾ ಹೆಗ್ಡೆ, ಕಲಾವಿದ ನಾಗೇಶ್ ಮಯ್ಯ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net