

ಮಂಗಳೂರು: ನಗರದ ನೆಹರೂ ಮೈದಾನದ ಫುಟ್‌ಬಾಲ್ ಗ್ರೌಂಡ್‌ನ ಪಬ್ಲಿಕ್ ಗ್ಯಾಲರಿಯಲ್ಲಿ ಮಲಗಿದ್ದ ಬಂಟ್ವಾಳ ಅಮ್ಮುಂಜೆಯ ಜನಾರ್ದನ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ಕೇರಳದ ತಿರುವನಂತಪುರ ಜಿಲ್ಲೆಯ ಪುಲ್ಲಂಪಾರ ಗ್ರಾಮದ ವರಿಕ್ಕಿಲ್ಲ ನಿವಾಸಿ ಪ್ರಶಾಂತ್ (40), ಕುಶಾಲನಗರದ ಸರ್ಕಾರಿ ಬಸ್ ನಿಲ್ದಾಣದ ಬಳಿಯ ನಿವಾಸಿ ಜಿ.ಕೆ.ರವಿ ಕುಮಾರ್ ಯಾನೆ ನಂದೀಶ (38), ಕೊಣಾಜೆ ಮದಕ ಗ್ರಾಮದ ಪಟ್ಟೈಗುಡ್ಡ ನಿವಾಸಿ ವಿಜಯ ಕುಟಿನ್ಹಾ (28) ಹಾಗೂ ವಿಟ್ಲ ಅನ್ನಮೂಲೆ ನಿವಾಸಿ ಶರತ್ ವಿ. (36) ಬಂಧಿತರು. ಆರೋಪಿಗಳೆಲ್ಲರೂ ಕ್ರಿಮಿನಲ್ ಹಿನ್ನೆಲೆಯುಳ್ಳವರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ: ಏ.18ರಂದು ಕೊಲೆಯಾದ ಜನಾರ್ದನ ಅವರು ಪಬ್ಲಿಕ್ ಗ್ಯಾಲರಿಯ ಮೇಲೆ ಮಲಗಿದ್ದರು. ಆಗ ನಾಲ್ವರು ಆರೋಪಿಗಳು ಬಂದು ಅವರಲ್ಲಿದ್ದ ಮೊಬೈಲನ್ನು ತೆಗೆದುಕೊಳ್ಳಲು ಅವರ ಪ್ಯಾಂಟ್ ಕಿಸೆಯಲ್ಲಿ ಹುಡುಕಾಡುತ್ತಿದ್ದಾಗ ಅವರು ಎಚ್ಚರಗೊಂಡಿದ್ದರು. ನಾಲ್ವರು ಆರೋಪಿಗಳು ಜನಾರ್ದನರಲ್ಲಿ ಮೊಬೈಲ್ ಕೊಡುವಂತೆ ಒತ್ತಾಯಿಸಿದ್ದು, ಅವರು ನಿರಾಕರಿಸಿದ್ದಾರೆ. ಈ ಸಂದರ್ಭ ಅವರಲ್ಲಿದ್ದ ಮೊಬೈಲನ್ನು ಸುಲಿಗೆ ಮಾಡಲು ಯತ್ನಿಸಿದ್ದು, ಜನಾರ್ದನ ಅವರು ಮೊಬೈಲ್ ಕೊಡದೇ ಇದ್ದಾಗ ಆರೋಪಿಗಳು ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಓರ್ವ ಅವರ ಎದೆಗೆ ತುಳಿದಿದ್ದಾನೆ. ಆಗ ಅವರು 6 ಅಡಿ ಎತ್ತರದಿಂದ ನೆಲಕ್ಕೆ ಬಿದ್ದಿದ್ದಾರೆ. ಬಳಿಕ ಮತ್ತೆ ಅವರಿಗೆ ಹಲ್ಲೆ ನಡೆಸಿ, ಕಾಲಿನಿಂದ ತುಳಿದು ಕೊಲೆ ಮಾಡಿ, ಅವರಲ್ಲಿದ್ದ ಮೊಬೈಲನ್ನು ಸುಲಿಗೆ ಮಾಡಿದ್ದಾರೆ. ಈ ಬಗ್ಗೆ ಜನಾರ್ದನ ಪೂಜಾರಿ ಅವರ ಅಣ್ಣ ಉಮೇಶ್ ಪೂಜಾರಿ ಪಾಂಡೇಶ್ವರ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಆರೋಪಿಗಳನ್ನು ಸೆಂಟ್ರಲ್ ರೈಲ್ವೆ ನಿಲ್ದಾಣದ ಮುತ್ತಪ್ಪ ಗುಡಿಯ ಬಳಿಯಿಂದ ವಶಕ್ಕೆ ಪಡೆದು ಠಾಣೆಯಲ್ಲಿ ವಿಚಾರಣೆ ನಡೆಸಿ, ಬಂಧಿಸಿದ್ದಾರೆ. ಮೃತರ ಮೊಬೈಲನ್ನು ವಶಕ್ಕೆ ಪಡೆದಿದ್ದಾರೆ.
ಕ್ರಿಮಿನಲ್ ಹಿನ್ನೆಲೆಯವರು: ಬಂಧಿತ ಆರೋಪಿಗಳ ಪೈಕಿ ಜಿ.ಕೆ.ರವಿಕುಮಾರ್ ವಿರುದ್ಧ 2009ರಲ್ಲಿ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ, ಆರೋಪಿ ಶರತ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ 2007ರಲ್ಲಿ ಮನೆ ಕಳವು ಪ್ರಕರಣ, ಉಡುಪಿ ಜಿಲ್ಲೆಯ ಮಣಿಪಾಲ ಪೊಲೀಸ್ ಠಾಣೆಯಲ್ಲಿ 2022ರಲ್ಲಿ ಸುಲಿಗೆ ಪ್ರಕರಣದಲ್ಲಿ ಬಂಧಿತನಾಗಿ ಇತ್ತೀಚೆಗೆ ಜೈಲ್‌ನಿಂದ ಬಿಡುಗಡೆಯಾಗಿದ್ದ. ವಿಜಯ ಕುಟಿನ್ಹಾ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ 2022ರಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.