

ಮಂಗಳೂರು: ಕರಾವಳಿ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ದ.ಕ., ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ 35 ಕೋಟಿ ರೂ.ಕಾಯ್ದಿರಿಸಲಾಗಿದೆ. ಪ್ರಾಧಿಕಾರದ ಇತಿಹಾಸದಲ್ಲೇ ಇದು ಗರಿಷ್ಠ ಅನುದಾನವಾಗಿದ್ದು, ಹೆಚ್ಚುವರಿಯಾಗಿ ಸರ್ಕಾರದಿಂದ 10 ಕೋಟಿ ರೂ. ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
2021-22ರಲ್ಲಿ ಕೈಗೊಂಡ 229 ಕಾಮಗಾರಿಗಳ ಪೈಕಿ 151 ಪೂರ್ಣವಾಗಿದೆ. 78 ಪ್ರಗತಿಯಲ್ಲಿದೆ. 2022-23ರಲ್ಲಿ 104 ರಸ್ತೆ ನಿರ್ಮಾಣ ಹಾಗೂ ಅಭಿವೃದ್ಧಿ, 12 ಕಾಲುಸಂಕ ಹಾಗೂ ಕಿರು ಸೇತುವೆ, 12 ಸಮುದಾಯ ಭವನ, 25 ಕಟ್ಟಡ ನಿರ್ಮಾಣ ಹಾಗೂ ಅಭಿವೃದ್ಧಿ, 11 ಶಾಲಾ ಕಟ್ಟಡ ಅಭಿವೃದ್ಧಿ ಸಹಿತ 207 ಕಾಮಗಾರಿಯನ್ನು ಒಟ್ಟು 24.33 ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದರು.
ಶಾಂಭವಿ ನದಿಗೆ 1 ಕೋಟಿ ರೂ ವೆಚ್ಚದಲ್ಲಿ ತೂಗುಸೇತುವೆ, ಭಟ್ಕಳದ ಆಳ್ವೆಕೋಡಿ ತೆಂಗಿನಗುಂಡಿ ತೂಗು ಸೇತುವೆ, ಬೆಟ್ಟಂಪಾಡಿ ಹಾಗೂ ಗೌರಿಹೊಳೆಯಲ್ಲಿ ಪ್ರತ್ಯೇಕ ತೂಗು ಸೇತುವೆ ಕಾಮಗಾರಿ ಕೈಗೊಳ್ಳಲಾಗಿದೆ. ಕಾರ್ಕಳದ ಬೈಲೂರಿನಲ್ಲಿ ಪರಶುರಾಮ ಥೀಂ ಪಾರ್ಕ್ ಅಭಿವೃದ್ಧಿಗೆ 1 ಕೋಟಿ ರೂ., ಬೆಳ್ತಂಗಡಿ ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕೆ 1 ಕೋಟಿ ರೂ. ಸಹಿತ ವಿವಿಧ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಪ್ರಧಾನಮಂತ್ರಿಗಳ ಮತ್ಸ್ಯಸಂಪದ ಯೋಜನೆಯಡಿ ಮಂಗಳೂರಿನ ಸಸಿಹಿತ್ಲು ಗ್ರಾಮದಲ್ಲಿ 7.50 ಕೋಟಿ ರೂ ವೆಚ್ಚದಲ್ಲಿ ಮೀನುಗಾರಿಕಾ ಗ್ರಾಮ ನಿರ್ಮಿಸಲು ಅನುಮೋದನೆ ಪಡೆಯಲಾಗಿದೆ. ಇದರ ಡಿಪಿಆರ್ ರಚಿಸಲು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅನುಷ್ಠಾನ ಸಂಸ್ಥೆಯಾಗಿದೆ. ಆದರೆ ಈ ಪ್ರದೇಶದಲ್ಲಿ ಜಂಗಲ್ ಲಾಡ್ಜ್‌ನ ಸ್ಥಳದ ಸಮಸ್ಯೆ ಎದುರಾಗಿದೆ. ಈ ಸಮಸ್ಯೆ ಇತ್ಯರ್ಥವಾಗದಿದ್ದರೆ ಪ್ರತ್ಯೇಕ ಸ್ಥಳ ಪರಿಶೀಲಿಸಲು ಸರ್ಕಾರವನ್ನು ಕೋರಲಾಗುವುದು ಎಂದು ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದರು.
ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿಸೋಜ, ಸದಸ್ಯೆ ಕೇಸರಿ ಯುವರಾಜ್, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಮಂಜುನಾಥ್ ಶೆಟ್ಟಿ, ವಿಶೇಷ ಕರ್ತವ್ಯಾಧಿಕಾರಿ ಪವನ್ ಶೆಟ್ಟಿ, ವಲಯಾಧಿಕಾರಿ ಹರಿಕಾಂತ್ ಉಪಸ್ಥಿತರಿದ್ದರು.