

ಭರತ್ ಶೆಟ್ಟಿಗಾರ್ ಮಂಗಳೂರು
ವಿಮಾನ ನಿಲ್ದಾಣ ರಸ್ತೆಯ ಮೇರಿಹಿಲ್ ಜಂಕ್ಷನ್ ಅಭಿವೃದ್ಧಿಗೆ ಸಂಬಂಧಿಸಿದಂತೆ ಪಾಲಿಕೆಯಿಂದ ಯೋಜನೆ ರೂಪಿಸಲಾಗಿದೆ. ಪ್ರೀಮಿಯಂ ಎಫ್‌ಎಆರ್ ಅನುದಾನದಡಿ ಯೋಜನೆ ಕೈಗೆತ್ತಿಕೊಳ್ಳಲು ಈಗಾಗಲೇ ಟೆಂಡರ್ ಕರೆದು, ಪಾಲಿಕೆ ಪರಿಷತ್‌ಗೆ ಮಂಡಿಸಿ ಅನುಮೋದನೆ ಪಡೆಯಲಾಗಿದೆ.
1.40 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಕಾರ್ಯಗತವಾಗಲಿದ್ದು, ಅಭಿವೃದ್ಧಿಯಾಗುತ್ತಿರುವ ಮೇರಿಹಿಲ್ ಜಂಕ್ಷನ್‌ಗೆ ಹಲವು ವರ್ಷಗಳ ಬಳಿಕ ಹೊಸ ಲುಕ್ ಸಿಗಲಿದೆ. ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ಈಗಾಗಲೇ ಒಂದು ಭಾಗದಲ್ಲಿ ಒಳ ರಸ್ತೆ ಕಾಮಗಾರಿ ನಡೆಯುತ್ತಿದೆ. ಶೀಘ್ರದಲ್ಲಿ ಸಂಪೂರ್ಣವಾಗಿ ಜಂಕ್ಷನ್‌ವರೆಗೆ ಈ ಕಾಂಕ್ರೀಟ್ ಕಾಮಗಾರಿ ನಡೆಯಲಿದೆ.
ನಂತರದಲ್ಲಿ ಇಂಟರ್‌ಲಾಕ್, ಬಸ್‌ಬೇ ನಿರ್ಮಾಣ, ಪಾದಚಾರಿಗಳಿಗಾಗಿ ಫುಟ್‌ಪಾತ್ ನಿರ್ಮಾಣ, ಮಳೆ ನೀರು ಹರಿಯುವ ತೋಡು ರಚನೆ ಮೊದಲಾದ ಪ್ರಮುಖ ಕಾಮಗಾರಿಗಳು ಯೋಜನೆಯಡಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಸದ್ಯ 4 ಲೇನ್ ಇರುವ ಮುಖ್ಯ ರಸ್ತೆ ಜಂಕ್ಷನ್ ಅಭಿವೃದ್ಧಿಯ ಭಾಗವಾಗಿ ಆ ಪ್ರದೇಶದಲ್ಲಿ 6 ಲೇನ್ ರಸ್ತೆಯಾಗಿ ಪರಿವರ್ತನೆಯಾಗಲಿದೆ. ಜತೆಗೆ ಆ ಭಾಗಕ್ಕೆ ಕಾಂಕ್ರೀಟ್ ಅಥವಾ ಇಂಟರ್‌ಲಾಕ್ ಅಳವಡಿಸಲು ಉದ್ದೇಶಿಸಲಾಗಿದೆ. ವೃತ್ತವನ್ನು ಸಮರ್ಪಕವಾಗಿ ಮಾಡುವ ನಿಟ್ಟಿನಲ್ಲಿಯೂ ಬೇಕಾದ ಪೂರಕ ಕ್ರಮವನ್ನು ಅಭಿವೃದ್ಧಿ ಕಾಮಗಾರಿಯಲ್ಲಿ ಕೈಗೊಳ್ಳಲಾಗುತ್ತದೆ. ಕಾಮಗಾರಿ ನಂತರದಲ್ಲಿ ವಾಹನಗಳ ಸಂಚಾರದಲ್ಲಿಯೂ ತುಸು ಬದಲಾವಣೆಯಾಗಲಿದೆ.
ಪೂರ್ವಭಾವಿ ಕೆಲಸಗಳು ಶುರು: ಜಂಕ್ಷನ್ ಅಭಿವೃದ್ಧಿಯ ಭಾಗವಾಗಿ ಈಗಾಗಲೇ ಸರ್ವೇ ಕಾರ್ಯ ನಡೆದಿದ್ದು, ಯೋಜನೆಗೆ ಸಂಬಂಧಿಸಿದಂತೆ ಅಲೈನ್‌ಮೆಂಟ್‌ಗಳನ್ನು ರಚಿಸಿದ ಬಳಿಕ ಕೆಲಸ ಆರಂಭವಾಗಲಿದೆ. ನಗರ ವಿಕಾಸ ಯೋಜನೆಯಡಿ ಈಗಾಗಲೇ ಆರಂಭವಾಗಿರುವ ರಸ್ತೆಯ ಅಭಿವೃದ್ಧಿ ಕೆಲಸವನ್ನು ಮೊದಲಿಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಈ ನಡುವೆ ಪದವಿನಂಗಡಿಯ ಸಾರ್ವಜನಿಕ ಗಣೇಶೋತ್ಸವದ ಗಣಪತಿ ಮೂರ್ತಿಯ ವಿಸರ್ಜನಾ ಮೆರವಣಿಗೆ ಅದೇ ರಸ್ತೆಯಲ್ಲಿ ಸಾಗುವುದರಿಂದ ಮೆರವಣಿಗೆಗೆ ಅಡ್ಡಿಯಾಗದ ರೀತಿಯಲ್ಲಿ ಕಾಮಗಾರಿ ಆರಂಭಿಸಬೇಕಿದೆ. ಕಂಬಗಳ ಶಿಫ್ಟಿಂಗ್ ಮೊದಲಾದ ಕೆಲಸಗಳನ್ನು ಮಾಡಿ ಮಗಿಸಲಾಗುವುದು ಎನ್ನುತ್ತಾರೆ ಕಾರ್ಪೋರೇಟರ್ ಸಂಗೀತಾ ನಾಯಕ್.
ಅಭಿವೃದ್ಧಿ ಹೊಂದುತ್ತಿರುವ ಪ್ರದೇಶ: ಮೇರಿಹಿಲ್ ಜಂಕ್ಷನ್ ಪ್ರದೇಶದಲ್ಲಿ ಸಾಕಷ್ಟು ಬಹುಮಹಡಿ ಕಟ್ಟಡಗಳು, ಶಾಲೆ, ಕಾಲೇಜು, ದೇವಸ್ಥಾನ, ಶಾಂಪಿಂಗ್ ಕಾಂಪ್ಲೆಕ್ಸ್, ಪೆಟ್ರೋಲ್ ಪಂಪ್, ವಸತಿ ಸಮುಚ್ಚಯ, ಮನೆಗಳು ಇವೆ. ಹೆಲಿಪ್ಯಾಡ್‌ಗೂ ಇದೇ ಪ್ರದೇಶದಲ್ಲಿ ಹಾದು ಹೋಗಬೇಕು. ಸಾಕಷ್ಟು ಜನಸಂಖ್ಯೆ ಇರುವ ಪ್ರದೇಶವೂ ಆಗಿದ್ದು, ಇಲ್ಲಿನ ಜಂಕ್ಷನ್ ಸುಂದರಗೊಳಿಸುವುದರಿಂದ ಪ್ರದೇಶದ ಅಭಿವೃದ್ಧಿಗೆ ಇನ್ನಷ್ಟು ವೇಗ ದೊರೆಯಲಿದೆ ಎನ್ನುವುದು ಜನರ ಅಭಿಪ್ರಾಯವಾಗಿದೆ.