ಫೆ.8 ಸದಾಶಿವ ಸಹಾಯ ಹಸ್ತ ವಿತರಣೆ-ಆರೋಗ್ಯ ವಿಮೆ ಉದ್ಘಾಟನೆ

mng--5 Feb Sadashiva
Published on

ಮಂಗಳೂರು: ಶ್ರೀ ಸದಾಶಿವ ಶೆಟ್ಟಿ ಸೇವಾ ಬಳಗ ಕೇಂದ್ರೀಯ ಸಮಿತಿ ವತಿಯಿಂದ ಸದಾಶಿವ ಸಹಾಯ ಹಸ್ತ ವಿತರಣೆ ಹಾಗೂ ಉಚಿತ ಆರೋಗ್ಯ ವಿಮೆ ಉದ್ಘಾಟನೆ ಫೆ.8ರಂದು ಚಿಗುರುಪಾದೆ ಮೀಂಜ ಬಂಟರ ಸಂಘದ ಮೈದಾನದಲ್ಲಿ ಜರುಗಲಿದೆ.

ಶ್ರೀ ಸದಾಶಿವ ಶೆಟ್ಟಿ ಅಭಿಮಾನಿ ಬಳಗ ಹಾಗೂ ಹಿತೈಷಿಗಳಿಂದ ಕರ್ನಾಟಕ ರಾಜ್ಯೋತ್ಸವ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತ ಸದಾಶಿವ ಶೆಟ್ಟಿ ಕನ್ಯಾನ ಅವರಿಗೆ ಅಭಿನಂದನಾ ಸಮಾರಂಭ ಈ ಸಂದರ್ಭದಲ್ಲಿ ನಡೆಯಲಿದೆ ಎಂದು ಬಳಗದ ಉಪಾದ್ಯಕ್ಷ ಕೆ.ನಾರಾಯಣ ನಾಕ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ, ಉಚಿತ ಆರೋಗ್ಯ ಕುಟುಂಬ ವಿಮೆ (5 ಲಕ್ಷ ರೂ.). ಆಂಬ್ಯುಲೆನ್ಸ್ ಹಸ್ತಾಂತರ, ಶಾಲಾ ವಾಹನ ಹಸ್ತಾಂತರ, ಶಾಲಾ ಅಭಿವೃದ್ಧಿಗೆ ಸಹಾಯ, ಅಂಗವಿಕಲರಿಗೆ ಕೃತಕ ಕಾಲು, ವೀಲ್‌ಚೇರ್, ಹೊಲಿಗೆ ಮಿಷನ್, ಕ್ಯಾನ್ಸರ್ ರೋಗಿಗಳಿಗೆ ಹಾಗೂ ಇತರ ರೋಗಿಗಳಿಗೆ ವಿಶೇಷ ಸಹಾಯ ವಿತರಣೆ ನಡೆಯಲಿದೆ. ಸುಮಾರು 4 ಸಾವಿರ ಜನ ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕುಂಬಳೆ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಮಂಡಪಲ್ಲ ಇದರ ಆಡಳಿತ ಮೊಕ್ತೇಸರ ಕೆ.ಕೆ.ಶೆಟ್ಟಿ ಕುತ್ತಿಕ್ಕಾರ್ ಅಧ್ಯಕ್ಷತೆ ವಹಿಸುವರು. ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ಎಲುಬು ತಜ್ಞ ಡಾ.ಶಾಂತಾರಾಮ ಶೆಟ್ಟಿ, ರೆ.ಫಾ.ಮೆಲ್ವಿನ್ ಜೋಸೆಫ್ ಪಿಂಟೋ, ಉಸ್ತಾದ್ ಅಝೀಮ್ ದಾರಿಮಿ ಉಪಸ್ಥಿತರಿರುವರು. ಡಾ.ಎಂ.ಮೋಹನ ಆಳ್ವ ಅಭಿನಂದನಾ ಭಾಷಣ ಮಾಡುವರು ಎಂದವರು ವಿವರಿಸಿದರು.

ಶ್ರೀ ಸದಾಶಿವ ಶೆಟ್ಟಿ ಸೇವಾ ಬಳಗ ಕೇಂದ್ರೀಯ ಸಮಿತಿ ಕಾರ್ಯದರ್ಶಿ ಜಯರಾಜ್ ಶೆಟ್ಟಿ ಜಾರ್ಲ, ಕೋಶಾಧಿಕಾರಿ ಕಾರ್ತಿಕ್ ಶೆಟ್ಟಿ ಮಜಿಬೈಲ್ ಹಾಗೂ ಕಾರ್ಯಕಾರಿ ಸಮತಿ ಸದಸ್ಯರಾದ ಪ್ರಮೋದ್ ಶೆಟ್ಟಿ, ಜಿತೇಂದ್ರ ಶೆಟ್ಟಿ, ಗಂಗಾಧರ ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net