ಮಂಗಳೂರು ಉದ್ಯೋಗ ಕೊಡಿಸುವುದಾಗಿ 2.66 ಲಕ್ಷ ರೂ. ಪಡೆದು ವಂಚನೆ

Fruad
Published on

ಮಂಗಳೂರು: ಸರ್ಕಾರಿ ಸಂಸ್ಥೆಗಳಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 2.66 ಲಕ್ಷ ರೂ. ವಂಚನೆ ಮಾಡಿರುವ ಕುರಿತಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅವಿನಾಶ್ ಶೆಟ್ಟಿ, ನಮ್ರತಾ, ಅಕ್ಷತಾ ಹಾಗೂ ಗೌತಮ್ ಶೆಟ್ಟಿ ಆರೋಪಿಗಳು. ದೂರುದಾರ ಲೋಕೇಶ್ ಸುವರ್ಣ ಅವರಿಗೆ ನಮ್ರತಾ ಎನ್ನುವವರ ಪರಿಚಯವಾಗಿದ್ದು, ಆಕೆ ತಾನು ಪ್ರತಿಷ್ಠಿತ ಸಂಸ್ಥೆಗಳಲ್ಲಿ ನೌಕರಿ ನೇಮಕಾತಿ ಮಾಡುತ್ತಿದ್ದು, ಟೆಂಡರುದಾರ ಅವಿನಾಶ್ ಶೆಟ್ಟಿಗೆ 2.50 ಲಕ್ಷ ರೂ. ನೀಡಿದರೆ ಉದ್ಯೋಗ ದೊರೆಯುತ್ತದೆ ಎಂದು ಹೇಳಿದ್ದಾಳೆ.

ಅದರಂತೆ ದೂರುದಾರರು ಅವಿನಾಶ್ ಶೆಟ್ಟಿ ಅವರಿಗೆ ಕರೆ ಮಾಡಿದ್ದು, ಆತ ಸೂಚನೆಯಂತೆ ದೂರುದಾರರ ಭಾವ ಮಂಗಳೂರು ಲಾಲ್‌ಬಾಗ್ ಪಾಲಿಕೆ ಕಚೇರಿ ಹಿಂಭಾಗದಲ್ಲಿ ಆತನನ್ನು ಭೇಟಿಯಾಗಿದ್ದಾರೆ. ಅವರ ಮಗಳಿಗೆ ಉದ್ಯೊಗದ ಬಗ್ಗೆ ಮಾತನಾಡಿ ಬಯೋಡಾಟಾ ಪಡೆದು, 2.50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾನೆ. ಅದರಂತೆ ಅವರು 2.50 ಲಕ್ಷ ರೂ. ಮೊತ್ತದ ಚೆಕ್ಕನ್ನು ನಮ್ರತಾಳಿಗೆ ನೀಡಿದ್ದಾರೆ. ಬಳಿಕ ಆತನನ್ನು ವಿಚಾರಿಸಿದಾಗ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾನೆ.

ಹಲವು ಜನರಿಗೆ ಉದ್ಯೋಗ ವಂಚನೆ ಮಾಡಿರುವ ಅವಿನಾಶ್ ಶೆಟ್ಟಿಯನ್ನು ಜ.5ರಂದು ಉರ್ವ ಠಾಣೆ ಪೊಲೀಸರು ಬಂಧಿಸಿರುವ ವಿಚಾರ ತಿಳಿದು ಬಂದಿದೆ. ಈ ನಡುವೆ ಚೆಕ್ ಅಕ್ಷತಾ ಎನ್ನುವಾಕೆಯ ಖಾತೆಯಲ್ಲಿ ಕ್ಲಿಯರ್ ಆಗಿದೆ. ಇದಲ್ಲದೆ ಇನ್ನಷ್ಟು ಮೊತ್ತವನ್ನು ಗೂಗಲ್ ಪೇ ಮೂಲಕ ಗೌತಮ್ ಶೆಟ್ಟಿ ಎಂಬಾತನಿಗೆ ವರ್ಗಾವಣೆ ಮಾಡಿದ್ದಾರೆ.

ಹಣ ಪಡೆದು ಉದ್ಯೋಗ ನೀಡದಿರುವ ಎಲ್ಲ ಆರೋಪಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ದೂರುದಾರರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net