

ಮಂಗಳೂರು: ನಗರದಲ್ಲಿ ಸ್ಮಾರ್ಟ್‌ಸಿಟಿಯಿಂದ ನಿರ್ಮಾಣ ಮಾಡಲು ಉದ್ದೇಶಿಸಿದ್ದ ಬಹು ನಿರೀಕ್ಷಿತ ಸೈಕಲ್ ಟ್ರ್ಯಾಕ್ ಯೋಜನೆ ಪ್ಲಾಪ್ ಆಗಿದೆ.
ನಗರದಲ್ಲಿ ವಾಹನಗಳ ಭರಾಟೆಯಿಂದ ಸೈಕಲ್ ಬಳಸುವವರಿಗೆ ಸೂಕ್ತ ಜಾಗ ಕಲ್ಪಿಸಲು ಹಾಗೂ ಶಾಲೆಗೆ ತೆರಳಲು ಸೈಕಲ್ ಬಳಸುವ ವಿದ್ಯಾರ್ಥಿಗಳ ಸಮಸ್ಯೆ ಮನಗಂಡು ಪ್ರತ್ಯೇಕ ಸೈಕಲ್ ಟ್ರ್ಯಾಕ್ ನಿರ್ಮಾಣ ಮಾಡುವ ಯೋಜನೆಯೊಂದನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಡೈರೆಕ್ಟರೇಟ್ ಆ್ ಅರ್ಬನ್ ಲ್ಯಾಂಡ್ ಟ್ರಾನ್ಸ್‌ಪೋರ್ಟ್ ವತಿಯಿಂದ ರೂಪಿಸಲಾಗಿತ್ತು.
ಆದರೆ ಟ್ರ್ಯಾಕ್ ನಿರ್ಮಿಸಲು ಬೇಕಾದ ಸೂಕ್ತ ಸ್ಥಳ ದೊರೆಯದ ಹಿನ್ನೆಲೆಯಲ್ಲಿ ಯೋಜನೆ ಕೈ ಬಿಡುವ ಹಂತಕ್ಕೆ ಸ್ಮಾರ್ಟ್ ಸಿಟಿ ತಲುಪಿದೆ. ಉದ್ದೇಶಿತ ಸೈಕಲ್ ಟ್ರ್ಯಾಕ್ ರೂಟ್‌ನಲ್ಲಿ ರೈಲ್ವೆ ಇಲಾಖೆಗೆ ಸೇರಿದ ಜಾಗವೂ ಇರುವುದರಿಂದ ಇಲ್ಲಿ ಟ್ರ್ಯಾಕ್ ನಿರ್ಮಿಸಲು ಇಲಾಖೆ ಅನುಮತಿ ಕೊಟ್ಟಿಲ್ಲ. ಇದರಿಂದ ಯೋಜನೆ ಪ್ರಕಾರ ಟ್ರ್ಯಾಕ್ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಆದರೂ ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮುಂದುವರಿದಿದ್ದು, ಜಾಗ ಲಭ್ಯವಾದರೆ ಪ್ರಕ್ರಿಯೆ ಮುಂದುವರಿಸಲಾಗುವುದು ಎಂದು ಸ್ಮಾರ್ಟ್‌ಸಿಟಿ ಅಧಿಕಾರಿಗಳು ತಿಳಿಸಿದ್ದಾರೆ.
ಆರಂಭಿಕ ಕೆಲಸ ನಡೆದಿತ್ತು
ಸೈಕಲ್ ಹಾದಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಆರಂಭಿಕ ಕೆಲಸಗಳು ಸ್ಮಾರ್ಟ್ ಸಿಟಿ ವತಿಯಿಂದ ನಡೆದಿತ್ತು. ಮಾರ್ಗನ್ಸ್ ಗೇಟ್‌ನ ಓಣಿಕೆರೆಯಲ್ಲಿ ಕೆಲವು ಮೀಟರ್‌ಗಳಷ್ಟು ರಸ್ತೆಗೆ ಸೈಕಲ್ ಟ್ರ್ಯಾಕ್‌ಗೆ ಸಂಬಂಧಿಸಿದ ಕೆಂಪು ಬಣ್ಣದ ಡಾಂಬರು ಹಾಕಲಾಗಿತ್ತು. ಅಂತಾರಾಷ್ಟ್ರೀಯ ಸೈಕಲ್ ಸವಾರರ ಭಾಷೆಯಲ್ಲಿ ಕರೆಲ್ಪಡುವ ‘ಫಿಗ್ಮೆಂಟೆಡ್ ಸೈಕಲ್ ಟ್ರ್ಯಾಕ್’ ಎನ್ನುವ ಹೆಸರಿನ ಈ ಕೆಂಪು ಬಣ್ಣದ ಮತ್ತು ಹಳದಿ ಬಣ್ಣದ ರಸ್ತೆಗಳನ್ನು ನಿರ್ಮಿಸುವುದು ಯೋಜನೆಯಲ್ಲಿತ್ತು. ಮುಖ್ಯ ರಸ್ತೆಯ ಬದಲಾಗಿ ಒಳ ರಸ್ತೆಗಳನ್ನೇ ಸೈಕಲ್ ಪಥ ಮಾಡುವುದು ಕೂಡಾ ನಗರದಲ್ಲಿ ವಿಶೇಷವಾಗಿತ್ತು.
ನಕ್ಷೆ ಸಿದ್ಧವಾಗಿತ್ತು
ಬೋಳಾರದ ಬೋಟ್ ರಿಪೇರಿ ಯಾರ್ಡ್‌ನಿಂದ ಕಾಸಿಯಾ ಶಾಲೆ, ಮಣಿಪಾಲ ಶಾಲೆ, ರೈಲು ನಿಲ್ದಾಣ, ಪುರಭವನ, ಕೇಂದ್ರ ಮಾರುಕಟ್ಟೆ, ರಥಬೀದಿ ಹೂವಿನ ಮಾರುಕಟ್ಟೆ, ಬಿಇಎಂ ಶಾಲೆ, ಕೆನರಾ ಶಾಲೆ, ಶಾರದಾ ವಿದ್ಯಾಲಯ, ಕೆನರಾ ಕಾಲೇಜು, ಎಸ್‌ಡಿಎಂ ಕಾಲೇಜು, ಕೊಡಿಯಾಲಬೈಲ್ ಟಿಎಂಎ ಪೈ ಕನ್ವೆನ್ಶನ್ ಸೆಂಟರ್ - ಶ್ರೀದೇವಿ ಕಾಲೇಜು ತನಕ ಮತ್ತು ಮಾರ್ನಮಿಕಟ್ಟೆ ರೈಲ್ವೇ ಓವರ್ ಬ್ರಿಡ್ಜ್, ಸಂತ ಜೋಸ್ೆ ಕಾಲೇಜು, ರೋಶನಿ ನಿಲಯ, ಹೈಲ್ಯಾಂಡ್ ಕಾಫಿ ವರ್ಕ್, ತೆರಿಗೆ ಕಚೇರಿ ವರೆಗೆ ಒಟ್ಟು 12 ಕಿ.ಮೀ. ಟ್ರ್ಯಾಕ್ ನಿರ್ಮಾಣಕ್ಕೆ ನಕ್ಷೆ ಸಿದ್ಧಪಡಿಸಲಾಗಿತ್ತು.
ಕೋಟ್)))
ನಗರದಲ್ಲಿ ಸೈಕಲ್ ಟ್ರ್ಯಾಕ್ ನಿರ್ಮಾಣಕ್ಕೆ ಸಂಬಂಧಿಸಿ ಯೋಜನೆಗೆ ಜಾಗದ ಸವಾಲು ಎದುರಾಗಿದೆ. ಕೆಲವು ಕಡೆಗಳಲ್ಲಿ ಜಾಗ ಅಂತಿಮ ಮಾಡಲಾಗಿತ್ತಾದರೂ, ಕೆಲವೊಂದು ತಾಂತ್ರಿಕ ತೊಡಕು ಇದೆ. ರೈಲ್ವೇ ಜಾಗ ಕೂಡಾ ಇದೆ. ಸದ್ಯ ಯೋಜನೆ ಸ್ಥಗಿತಗೊಂಡಿದೆ.
-ಅರುಣ್ ಪ್ರಭ
ಜನರಲ್ ಮ್ಯಾನೇಜರ್, ಸ್ಮಾರ್ಟ್ ಸಿಟಿ ಮಂಗಳೂರು