

ಮಂಗಳೂರು: ಪದವು ಗ್ರಾಮದ 3.50 ಎಕ್ರೆ ಟಿ.ಡಿ.ಆರ್. ನೀಡಿ ಜಾಗ ಖರೀದಿಗೆ ಮಂಜೂರಾತಿ ನೀಡಬಾರದು ಎಂದು ಮಹಾನಗರ ಪಾಲಿಕೆ ವಿಪಕ್ಷ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ವ್ಯಾಪಕ ಆರೋಪ, ಆಕ್ಷೇಪಗಳ ನಡುವೆ ಮೇಯರ್ ಮನೋಜ್ ಕುಮಾರ್ ವಿಪಕ್ಷದ ಆಕ್ಷೇಪ ದಾಖಲಿಸಿಕೊಂಡು ಅನುಮೋದನೆಗೆ ಅಂಗೀಕಾರ ನೀಡಿದರು.
ಮನಪಾ ಸಭಾಂಗಣದಲ್ಲಿ ಗುರುವಾರ ಮೇಯರ್ ಮನೋಜ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಈ ವಿಚಾರದಲ್ಲಿ ವ್ಯಾಪಕ ಗದ್ದಲ ನಡೆಯಿತು.
ಸಭೆಯ ಆರಂಭದಲ್ಲಿಯೇ ಮೇಯರ್ ಮನೋಜ್ ಕುಮಾರ್‌ರವರು ಪದವು ಗ್ರಾಮದ ಸರ್ವೆ ನಂ. 81/2ಎಯಲ್ಲಿನ 1.44.8 ಎಕರೆ ಹಾಗೂ ಸರ್ವೆ. ನಂ. 284/5ರಲ್ಲಿನ 1.97.80 ಎಕರೆ ಸೇರಿ ಒಟ್ಟು 3.42.60 ಎಕರೆ ಜಾಗವನ್ನು ಟಿಡಿಆರ್ ನಿಯಮದಡಿ ಸ್ವಾಧೀನ ಪಡಿಸಲು ಮಂಜೂರಾತಿ ನೀಡುವುದಾಗಿ ಹೇಳಿದರು.
ಇದಕ್ಕೆ ಆಕ್ಷೇಪಿಸಿದ ವಿಪಕ್ಷ ನಾಯಕ ಅನಿಲ್ ಕುಮಾರ್, ಸದಸ್ಯರಾದ ಅಬ್ದುಲ್ ರವೂಫ್, ನವೀನ್ ಡಿಸೋಜ ಸೇರಿದಂತೆ ವಿಪಕ್ಷ ಸದಸ್ಯರು ಯಾವ ಕಾರಣಕ್ಕೆ ಅದಕ್ಕೆ ಪೂರ್ವಭಾವಿ ಮಂಜೂರಾತಿ ನೀಡಲಾಗಿದೆ ಎಂದು ಪ್ರಶ್ನಿಸಿದರು.
ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸದೆ ಅವೈಜ್ಞಾನಿಕವಾದ ಜಾಗ ಕದ್ದು ಮುಚ್ಚಿ ಖರೀದಿ ಮಾಡುವ ಉದ್ದೇಶ ಏನು? ಹಿಂದಿನ ಮೇಯರ್ ಸುಧೀರ್ ಶೆಟ್ಟಿ ಪೆಂಡಿಂಗ್ ಇಟ್ಟಿದ್ದ ಈ ಜಾಗದ ಖರೀದಿ ಪ್ರಕ್ರಿಯೆಗೆ ಆಸಕ್ತಿ ವಹಿಸಲು ಕಾರಣ ಏನು? ಆ ವಾರ್ಡ್‌ನ ಸದಸ್ಯರೇ ಆಕ್ಷೇಪ ವ್ಯಕ್ತಪಡಿಸಿದ್ದ ಜಾಗ ಯಾವ ಉದ್ದೇಶಕ್ಕೆ ಖರೀದಿಸುತ್ತಿದ್ದೀರಿ? ಎಂದು ವಿಪಕ್ಷ ಸದಸ್ಯ ಅಬ್ದುಲ್ ರವೂಫ್ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಮೇಯರ್ ಮನೋಜ್ ಜುಮಾರ್, ಪೌರ ಕಾರ್ಮಿಕರಿಗೆ ಮನೆ ನಿರ್ಮಾಣಕ್ಕಾಗಿ ಈ ಜಾಗ ಖರೀದಿಸಲು ಮುಂದಾಗಿದ್ದೇವೆ. ಆ ವಾರ್ಡ್‌ನ ಸದಸ್ಯ ಕಿಶೋರ್ ಕೊಟ್ಟಾರಿ ಅವರಿಗೆ ಮೊದಲು ಮಾಹಿತಿ ಇಲ್ಲದ ಕಾರಣ ಆಕ್ಷೇಪ ವ್ಯಕ್ತಪಡಿಸಿದ್ದರು. ಜಾಗ ಪರಿಶೀಲನೆ ನಡೆಸಿದ ಬಳಿಕ ಅವರಿಗೆ ಒಪ್ಪಿಗೆಯಾಗಿದೆ ಎಂದರು.
ಈಗಾಗಲೇ ಕಾರ್ಯಸೂಚಿ ಸ್ಥಿರೀಕರಿಸಿ ಆಗಿದ್ದು, ಕೈಬಿಡಲು ಆಗದು ಎಂದು ಮೇಯರ್ ಹೇಳಿದಾಗ, ಅಂತಹ ತುರ್ತು ಏನಿದೆ, ಹಿಂದಿನ ಮೇಯರ್ ಮುಂದೂಡಿದ್ದನ್ನು, ಆಕ್ಷೇಪ ವ್ಯಕ್ತವಾಗಿರುವ ಟಿಡಿಆರ್ ವಿಚಾರವನ್ನು ಸ್ಥಿರೀಕರಿಸಿದ್ದು ಯಾಕಾಗಿ ಎಂದು ತಿಳಿಸಿ ಎಂದು ವಿಪಕ್ಷ ಸದಸ್ಯರು ಪಟ್ಟು ಹಿಡಿದರು.
ಪೌರ ಕಾರ್ಮಿಕರಿಗೆ ಮನೆ ಕಟ್ಟಿಕೊಡುವ ಉದ್ದೇಶ ಇದ್ದರೆ ಈಗಾಗಲೇ ಬೋಂದೆಲ್‌ನಲ್ಲಿ 10 ಎಕ್ರೆ ಹಾಗೂ ಶಕ್ತಿನಗರದಲ್ಲಿ 10 ಎಕ್ರೆ ಸೇರಿದಂತೆ ಒಟ್ಟು 20 ಎಕ್ರೆ ಜಾಗ ಖರೀದಿ ಮಾಡಲಾಗಿದೆ. ಇದುವರೆಗೆ ಒಂದೇ ಒಂದು ಮನೆ ಕಟ್ಟಲು ಯಾಕೆ ಸಾಧ್ಯವಾಗಲಿಲ್ಲ ಎಂದು ವಿನಯರಾಜ್ ಪ್ರಶ್ನಿಸಿದರು.
ಈ ಸಂದರ್ಭ ಕೆಲಹೊತ್ತು ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ವಾಗ್ವಾದ ಉಂಟಾದಾಗ ವಿಪಕ್ಷ ಸದಸ್ಯರು ಮೇಯರ್ ಪೀಠದೆದುರು ತೆರಳಿ ಈ ಕಾರ್ಯಸೂಚಿ ಕೈ ಬಿಡಬೇಕು, ಟಿಡಿಆರ್ ಅನುಮೋದನೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಮಂಗಳೂರಿಗೆ ಭೇಟಿ ನೀಡಿ ಮೊದಲ ಸಭೆ ನಡೆಸಿದಾಗ ಬಡವರಿಗೆ ಮನೆ ಕಟ್ಟಲು ಜಾಗ ಗುರುತಿಸಲು ಹೇಳಿದ್ದರು. ಈಗಾಗಲೇ ಮನೆ ಕಟ್ಟಿ ಕೊಡುವಂತೆ 1 ಸಾವಿರಕ್ಕಿಂತಲೂ ಅಧಿಕ ಅರ್ಜಿಗಳು ಬಂದಿವೆ. ಅವರಿಗೆ ಮನೆ ಕಟ್ಟಿ ಕೊಡುವುದು ನಮ್ಮ ಕರ್ತವ್ಯ ಎಂದರು.
ಈ ಜಾಗ ಮನೆ ನಿರ್ಮಾಣದ ಕಾರ್ಯಸಾಧ್ಯತೆಯ ವರದಿಯನ್ನು ಹೊಂದಿದ್ದರೆ ಅದರ ಕಡತ ತರಿಸಿ ವಿವರ ನೀಡಿ ಎಂದು ಶಶಿಧರ ಹೆಗ್ಡೆ ಒತ್ತಾಯಿಸಿದರು.
ಶಕ್ತಿನಗರದಲ್ಲಿ ಡೀಮ್ಡ್ ಫಾರೆಸ್ಟ್‌ನಲ್ಲಿ 930 ಜನರಿಗೆ ಹಕ್ಕುಪತ್ರ ವಿತರಿಸಿ ಅನ್ಯಾಯ ಮಾಡಿದ್ದು ಯಾರು? ಪ್ರಸಕ್ತ ರಾಜ್ಯ ಸರ್ಕಾರದಿಂದ ಪಾಲಿಕೆಗೆ ಒಂದೇ ಒಂದು ರೂಪಾಯಿ ಅನುದಾನ ಬಂದಿಲ್ಲ ಎಂದು ಪಾಲಿಕೆಯ ಆಡಳಿತ ಪಕ್ಷದ ಸದಸ್ಯರು ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಹೊರಿಸಿದರೆ, ಡೀಮ್ಡ್ ಫಾರೆಸ್ಟ್ ಆಗಿದ್ದ ಜಾಗದಲ್ಲಿ 930 ಜನರಿಗೆ ವಸತಿ ನಿರ್ಮಾಣಕ್ಕಾಗಿ 125 ಕೋಟಿ ರೂ.ಗಳ ಅಗತ್ಯವಿದೆ ಎಂಬ ಪ್ರಸ್ತಾಪವನ್ನು ಇದೀಗ ರಾಜ್ಯ ಸರ್ಕಾರಕ್ಕೆ ಪಾಲಿಕೆಯಿಂದ ಸಲ್ಲಿಸಿದ್ದು ಹೇಗೆ, ಡೀಮ್ಡ್ ಫಾರೆಸ್ಟ್ ಜಾಗ ಈಗ ಸರಿಯಾಗಿದ್ದು ಹೇಗೆ ಎಂದು ಆಡಳಿತ ಪಕ್ಷದ ಸದಸ್ಯರು ಆರೋಪಿಸಿದಾಗ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಪರಸ್ಪರ ಆರೋಪ- ಪ್ರತ್ಯಾರೋಪಗಳ ವ್ಯಕ್ತವಾಗಿ ಸಭೆಯಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು.
ಉಪ ಮೇಯರ್ ಭಾನುಮತಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ವೀಣ ಮಂಗಳ, ಕದ್ರಿ ಮನೋಹರ ಶೆಟ್ಟಿ, ಸುಮಿತ್ರ, ಸರಿತಾ ಶ್ರೀಧರ್, ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಉಪಸ್ಥಿತರಿದ್ದರು.