

ಹರೀಶ್ ಮೋಟುಕಾನ, ಮಂಗಳೂರು
ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸಲು ಹೊಸ ಎರಡು ಆ್ಯಪ್ ಬಿಡುಗಡೆ ಮಾಡುವ ಭರವಸೆ ನೀಡಿ ನಾಲ್ಕೈದು ತಿಂಗಳು ಕಳೆದರೂ, ಮಹಾನಗರ ಪಾಲಿಕೆ ಇನ್ನೂ ಆ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ. ನಗರದ ನಾಗರಿಕರ ಮೂಲಸೌಕರ್ಯ, ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕಾಗಿ ಆ್ಯಪ್ ಮೂಲಕ ತಂತ್ರಜ್ಞಾನದ ಸ್ಪರ್ಶ ನೀಡಲು ಪಾಲಿಕೆ ಯೋಜನೆ ರೂಪಿಸಿತ್ತು. ಈ ಕುರಿತು ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ ಪಾಲಿಕೆ ಆಯುಕ್ತರೊಂದಿಗೆ ಚರ್ಚೆ ನಡೆಸಿ, ಪೂರ್ಣ ಬೆಂಬಲವನ್ನೂ ವ್ಯಕ್ತಪಡಿಸಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ವೇಳೆಗೆ ಮಹಾನಗರ ಪಾಲಿಕೆ ವ್ಯವಹಾರ ಹಾಗೂ ಜನರ ಸಮಸ್ಯೆ ಆಲಿಸಲು ಎರಡು ಆ್ಯಪ್‌ಗಳು ಜನಸೇವೆಗೆ ಸಿಗಬೇಕಿತ್ತು. ಆದರೆ ಹಾಗಾಗಲಿಲ್ಲ.
ಸಮಸ್ಯೆ ಹೇಳಲು ಆ್ಯಪ್: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜನಸಾಮಾನ್ಯರಿಗೆ ಯಾವುದೇ ಸಮಸ್ಯೆ ಎದುರಾದರೆ ಅದನ್ನು ಸಂಬಂಧಿತ ಅಧಿಕಾರಿಗಳಿಗೆ ತಲುಪಿಸುವುದು ಜನರಿಗೆ ದೊಡ್ಡ ಸಮಸ್ಯೆ. ಇದರ ಪರಿಹಾರಕ್ಕೆ ಪಾಲಿಕೆ ಆ್ಯಪ್ ಪರಿಚಯಿಸಲು ಚಿಂತನೆ ಮಾಡಿತ್ತು. ಈ ಮೂಲಕ ಪರಿಸರದ ಸಮಸ್ಯೆಗಳನ್ನು ಪಾಲಿಕೆ ಅಧಿಕಾರಿಗಳಿಗೆ ಸುಲಭವಾಗಿ ತಲುಪಿಸಬಹುದು, ವೇಗವಾಗಿ ಪರಿಹಾರವನ್ನೂ ಪಡೆದುಕೊಳ್ಳಲು ಸಾಧ್ಯವಿದೆ.
ಸವತ್ತುಗಳ ಆ್ಯಪ್ ಕತೆಯೂ ಅಷ್ಟೇ!: ಇನ್ನೊಂದು ಆ್ಯಪ್ ಮಹಾನಗರ ಪಾಲಿಕೆ ಸವಲತ್ತುಗಳನ್ನು ಪಡೆಯಲು. ಇದರಲ್ಲಿ ಮೊದಲ ಹಂತದಲ್ಲಿ ಟ್ರೇಡ್ ಲೈಸೆನ್ಸ್ ಮಾತ್ರ ಪಡೆಯುವ ಅವಕಾಶ. ಮುಂದಿನ ಹಂತದಲ್ಲಿ ಇತರ ಸೇವೆಗಳನ್ನು ಪಡೆಯುವಂತೆ ಆ್ಯಪ್ ಮಾರ್ಪಾಡು ಮಾಡಲಾಗುವುದು. ಈ ಎರಡು ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ತಮ್ಮ ಕೆಲಸಗಳನ್ನು ಸಾರ್ವಜನಿಕರು ಮೊಬೈಲ್ ಮೂಲಕ ಕುಳಿತಲ್ಲಿಂದಲೇ ಮಾಡಿಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದರು. ಈಗಾಗಲೇ ಆನ್‌ಲೈನ್ ಸೇವೆಗಳು ಮನಪಾ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ನಾಗರಿಕ ದೂರುಗಳ ನೋಂದಣಿಗೆ ‘ಜನಹಿತ’, ಕಟ್ಟಡ ಪರವಾನಗಿಗೆ ‘ನಿರ್ಮಾಣ’, ಟ್ರೇಡ್ ಪರವಾನಗಿಗೆ ‘ವ್ಯಾಪಾರ’, ಹೊಸ ನೀರು ಸಂಪರ್ಕ ಹಾಗೂ ಒಳಚರಂಡಿ ಜೋಡಣೆಗೆ ‘ಜಲನಿಧಿ’ ಸೇವೆಗಳು ಲಭ್ಯವಿದೆ. ಈ ಮೂಲಕವೂ ಸಾರ್ವಜನಿಕರು ಸೇವೆ ಪಡೆಯುತ್ತಿದ್ದಾರೆ ಎಂದು ಮನಪಾ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಮಾದರಿ: ಬೆಂಗಳೂರಿನ ಬಿಬಿಎಂಪಿಯಲ್ಲಿ ಸಾರ್ವಜನಿಕ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಿ ಪರಿಹರಿಸುವ ನಿಟ್ಟಿನಲ್ಲಿ ‘ಸಹಾಯ’ ಆ್ಯಪ್ ಇದೆ. ಇದರಲ್ಲಿ ಸಾರ್ವಜನಿಕರು ಘನತ್ಯಾಜ್ಯ ನಿರ್ವಹಣೆ, ರಸ್ತೆ ಅವ್ಯವಸ್ಥೆ ಮುಂತಾದ ಸಮಸ್ಯೆಗಳ ಬಗ್ಗೆ ದೂರು ನೀಡುವ ವ್ಯವಸ್ಥೆ ಇದೆ. ಘನತ್ಯಾಜ್ಯ ಸಮಸ್ಯೆಯ ದೂರು ದಾಖಲಾದ 12 ಗಂಟೆಯೊಳಗೆ ಪರಿಹರಿಸಬೇಕು ಎಂಬ ನಿಯಮ ಇದೆ. ಇದರಲ್ಲಿ ಗಣನೀಯ ಪ್ರಮಾಣದಲ್ಲಿ ದೂರುಗಳು ದಾಖಲಾಗುತ್ತಿದೆ. ಕಾಲಮಿತಿಯಲ್ಲಿ ಬಗೆಹರಿಸದ ಅಧಿಕಾರಿಗಳ ವಿರುದ್ಧ ಬಿಬಿಎಂಪಿ ಕ್ರಮ ಕೈಗೊಳ್ಳುತ್ತಿದೆ. ಇದೇ ಮಾದರಿಯಲ್ಲಿ ಮನಪಾ ಆ್ಯಪ್ ಕಾರ್ಯನಿರ್ವಹಿಸಿದರೆ ನಗರದ ಜನತೆಗೆ ಸಹಾಯವಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಮಂಗಳೂರು ಮಹಾನಗರ ಪಾಲಿಕೆಯಿಂದ ಹೊಸ ಆ್ಯಪ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲೇ ಪೂರ್ಣಗೊಂಡು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ.
ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ಮನಪಾ ಆಯುಕ್ತ
ಎರಡು ಆ್ಯಪ್‌ಗಳ ತಯಾರಿ ಪ್ರಕ್ರಿಯೆ ಶೇ.80ರಷ್ಟು ಪೂರ್ಣಗೊಂಡಿದೆ. ಇನ್ನೂ ಒಂದಷ್ಟು ದಿನ ಸಮಯಾವಕಾಶ ಬೇಕಾಗಿದೆ. ಆದಷ್ಟು ಶೀಘ್ರ ಪ್ರಕ್ರಿಯೆ ಪೂರ್ಣಗೊಳಿಸಲು ಪ್ರಯತ್ನ ಮುಂದುವರಿದಿದೆ.
ಡಾ.ಜಿ.ಸಂತೋಷ್ ಕುಮಾರ್, ಮನಪಾ ಉಪ ಆಯುಕ್ತರು (ಆಡಳಿತ)