

ಮಂಗಳೂರು: ತುಂಬೆಯಲ್ಲಿ ಬೇಕಾದಷ್ಟು ನೀರಿನ ಸಂಗ್ರಹ ಇದ್ದರೂ ಮಹಾನಗರಪಾಲಿಕೆ ವ್ಯಾಪ್ತಿಯ ಬಹುತೇಕ ವಾರ್ಡ್‌ಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ.
ಎತ್ತರ ಪ್ರದೇಶಗಳಿಗೆ ನೀರು ಪೂರೈಕೆಯಾಗುತ್ತಿಲ್ಲ. ಕೆಲವು ಕಡೆ ಟ್ಯಾಂಕರ್ ಮೂಲಕವೂ ನೀರು ಪೂರೈಕೆಯಾಗದೇ ಇರುವುದರಿಂದ ಅಲ್ಲಿನ ನಿವಾಸಿಗಳು ನೀರಿಗಾಗಿ ಮೈಲುಗಟ್ಟಲೆ ದೂರ ಸಾಗುವಂತಾಗಿದೆ. ನಗರದ ಕೆಲವು ಕಡೆ ಒಳ ಚರಂಡಿ ನೀರು ಬಾವಿಗಳಿಗೆ ಸೇರಿ ಕಲುಷಿತಗೊಂಡು ಇದನ್ನೇ ನಂಬಿದ್ದವರಿಗೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ.
ಬೊಕ್ಕಪಟ್ಣದಲ್ಲಿ ನೀರು ಪೂರೈಕೆಯಾಗುವ ಪೈಪ್‌ನಲ್ಲಿ ತೊಂದರೆ ಕಾಣಿಸಿಕೊಂಡ ಪರಿಣಾಮ ಕೆಲವು ದಿನಗಳಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಅಲ್ಲಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಬಂದರು, ಬೆಂದೂರ್‌ವೆಲ್ ಪರಿಸರ, ಮೇರಿಹಿಲ್ ಮೊದಲಾದ ಕಡೆಗಳಲ್ಲಿ ಪೈಪ್‌ಗಳನ್ನು ನೀರು ಬರುತ್ತಿಲ್ಲ. ಟ್ಯಾಂಕರ್ ಮೂಲಕವೂ ಪೂರೈಕೆ ಮಾಡುತ್ತಿಲ್ಲ. ಇದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
*ಪಂಪ್ ಹಾಳಾಗಿ ಸಮಸ್ಯೆ:
ಪಂಜಿಮೊಗರು ವಾರ್ಡ್‌ನ ಎತ್ತರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದೆ. ವಿದ್ಯಾನಗರ, ಉರುಂದಾಡಿ ಮತ್ತಿತರ ಕಡೆಗಳಲ್ಲಿ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಆಗಾಗ ಪಂಪ್ ಹಾಳಾಗುವುದರಿಂದ ತೀವ್ರ ಸಮಸ್ಯೆ ಉಂಟಾಗುತ್ತಿದೆ. ಪಂಪ್ ಹಾಳಾದರೆ ಸರಿಯಾಗಲು ನಾಲ್ಕೈದು ದಿನಗಳು ಬೇಕಾಗುತ್ತದೆ. ಒತ್ತಡದಲ್ಲಿ ನೀರು ಹಾಯಿಸಿದರೆ ಸಿಮೆಂಟ್ ಪೈಪ್‌ಗಳು ಒಡೆದು ಇನ್ನಷ್ಟು ತೊಂದರೆ ಉಂಟಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
*2 ದಿನಗಳಿಗೊಮ್ಮೆ ನೀರು:
ವಾಮಂಜೂರು, ಪಚ್ಚನಾಡಿ, ತಿರುವೈಲು ಪರಿಸರದಲ್ಲಿ ಕುಡಿಯುವ ನೀರಿಗೆ ಸಂಕಷ್ಟ ಪಡುತ್ತಿದ್ದಾರೆ. 2 ದಿನಗಳಿಗೊಮ್ಮೆ 1 ಗಂಟೆ ನೀರು ಬಿಡುತ್ತಾರೆ. ಇದು ಸಾಕಾಗುವುದಿಲ್ಲ. ಪಚ್ಚನಾಡಿ ಡಂಪಿಂಗ್ ಯಾರ್ಡ್‌ನ ಕೊಳಚೆ ನೀರು ಬಾವಿಗಳಿಗೆ ಸೇರಿರುವುದರಿಂದ ಬಾವಿ ನೀರು ಕುಡಿಯಲು ಯೋಗ್ಯವಾಗಿಲ್ಲ. ಟ್ಯಾಂಕರ್ ಮೂಲಕವೂ ಪೂರೈಕೆ ಮಾಡುತ್ತಿಲ್ಲ. ಪಾಲಿಕೆ ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ನೀರು ಪೂರೈಸಿದರೆ ಮಾತ್ರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲು ಸಾಧ್ಯ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ನಗರದ ಬಹಳಷ್ಟು ವಸತಿ ಸಮುಚ್ಚಯಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಅವರು ಖಾಸಗಿಯಾಗಿ ಟ್ಯಾಂಕರ್ ನೀರು ಖರೀದಿ ಮಾಡುತ್ತಿದ್ದಾರೆ. ಪಾಂಡೇಶ್ವರ, ಮೇರಿಹಿಲ್ ಮೊದಲಾದ ಕಡೆಗಳಲ್ಲಿ ವಸತಿ ಸಮುಚ್ಚಯಗಳಿಗೆ ವಾರದಲ್ಲಿ ಏಳೆಂಟು ಟ್ಯಾಂಕರ್ ನೀರು ಪೂರೈಕೆಯಾಗುತ್ತಿದೆ.
ಮಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವಲ್ಲಿಗೆ ಟ್ಯಾಂಕರ್ ಮೂಲಕ ಪೂರೈಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆಲವು ಕಡೆ ಪೈಪ್ ಹಾನಿಯಾಗಿ ಸಮಸ್ಯೆ ಉಂಟಾಗಿದ್ದರೆ ತಕ್ಷಣ ಸರಿಪಡಿಸಲು ತಿಳಿಸಲಾಗಿದೆ. ತುಂಬೆಯಲ್ಲಿ 45 ದಿನಗಳಿಗೆ ಬೇಕಾಗುವಷ್ಟು ನೀರಿನ ಸಂಗ್ರಹ ಇದೆ. ಕಡಿಮೆಯಾದಂತೆ ಎಎಂಆರ್ ಡ್ಯಾಂನಿಂದ ಬಿಡುಗಡೆ ಮಾಡಲಾಗುತ್ತಿದೆ.
ಜಯಾನಂದ ಅಂಚನ್, ಮೇಯರ್