

ಮಂಗಳೂರು: ತಿರುಪತಿ ಸಮೀಪದ ಜಲಪಾತವೊಂದಕ್ಕೆ ಪ್ರವಾಸಿಗನಾಗಿ ತೆರಳಿದ್ದ ಮಂಗಳೂರಿನ ಯುವಕನೊಬ್ಬ ಜಲಪಾತಕ್ಕೆ ಧುಮುಕಿ ಮೇಲೆ ಬರಲಾಗದೆ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಕುಳಾಯಿ ಹೊನ್ನೆಕಟ್ಟೆ ನಿವಾಸಿ ಸುಮಂತ್ ಅಮೀನ್ (23) ಮೃತ ಯುವಕ.
ಸುಮಂತ್ ಅವರು ಚೆನ್ನೈಯ ಪ್ರತಿಷ್ಠಿತ ರಾಜೀವ ಗಾಂಧಿ ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ ವ್ಯಾಸಂಗ ಮಾಡುತ್ತಿದ್ದು, ಶುಕ್ರವಾರ ತಂದೆಯ ಬಳಿ ತಿರುಪತಿಗೆ ಹೋಗುವುದಾಗಿ ಹೇಳಿ ಹೋಗಿದ್ದರು. ಮಧ್ಯಾಹ್ನ 2.30ರ ವೇಳೆಗೆ ತಿರುಪತಿಯಿಂದ 60 ಕಿ.ಮೀ. ದೂರದ ತಲಕೋನ ಜಲಪಾತಕ್ಕೆ ತನ್ನ ಸಹಪಾಠಿ ಜತೆ ಹೋಗಿ ಸ್ನಾನ ಮಾಡುತ್ತಿದ್ದರು. ಈ ಸಂದರ್ಭ ಬಂಡೆಕಲ್ಲಿನಿಂದ 10 ಅಡಿ ಕೆಳಭಾಗಕ್ಕೆ ಧುಮುಕಿದಾಗ ನೀರು ಹಾದು ಹೋಗುವ ಗುಹೆಗೆ ಕಾಲು ಸಿಲುಕಿದೆ. ಸುಮನ್ ಬೊಬ್ಬೆ ಹಾಕಿದರೂ ಏನೂ ಪ್ರಯೋಜನವಾಗಿಲ್ಲ. ಇದನ್ನು ನೋಡಿದ ಗೆಳೆಯ ಕೂಡಲೇ ಧಾವಿಸಿ ಸುಮಂತ್‌ನನ್ನು ಮೇಲಕ್ಕೆತ್ತಿದ್ದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಕೂಡಲೇ ಮನೆಯಲ್ಲಿರುವವರಿಗೆ ವಿಚಾರ ತಿಳಿಸಲಾಗಿದ್ದು, ಭಾನುವಾರ ಬೆಳಗ್ಗೆ ಮೃತದೇಹವನ್ನು ಕುಳಾಯಿ ಹೊನ್ನೆಕಟ್ಟೆಯಲ್ಲಿರುವ ಮನೆಗೆ ತಂದು ಬಳಿಕ ಅಂತ್ಯ ಸಂಸ್ಕಾರ ಮಾಡಲಾಯಿತು.
ಸುಮಂತ್ ಅಮೀನ್ ಅವರು ಪ್ರತಿಭಾನ್ವಿತ, ಪರೋಪಕಾರಿ ವಿದ್ಯಾರ್ಥಿಯಾಗಿದ್ದರು. ಡಾಕ್ಯುಮೆಂಟರಿ, ಫೊಟೋಗ್ರಫಿ, ಪ್ರವಾಸ ಅವರ ಹವ್ಯಾಸವಾಗಿತ್ತು. 2 ವರ್ಷದ ಹಿಂದೆ ಎಂಎಸ್ಸಿ ವಿದ್ಯಾಭ್ಯಾಸಕ್ಕೆ ಚೆನ್ನೈನ ರಾಜೀವ್‌ಗಾಂಧಿ ಯುನಿವರ್ಸಿಟಿಗೆ ತೆರಳಿ ವ್ಯಾಸಂಗ ಮಾಡುತ್ತಿದ್ದರು.ಸುಮಂತ್ ಅವರು ತಂದೆ ಕೆನರಾ ಬ್ಯಾಂಕ್ ಮ್ಯಾನೇಜರ್ ಸುರೇಶ್ ಅಮೀನ್, ತಾಯಿ ಕೆಂಜಾರು ಸರ್ಕಾರಿ ಶಾಲೆಯ ಮುಖ್ಯಶಿಕ್ಷಕಿ ಉಮಾಕ್ಷಿ ಹಾಗೂ ತಂಗಿಯನ್ನು ಅಗಲಿದ್ದಾರೆ.