

ಮಂಗಳೂರು: ಹೆಚ್ಚುತ್ತಿರುವ ಸೈಬರ್ ಕ್ರೈಂ ಜಾಲ ಮತ್ತು ಬೆದರಿಕೆಗಳನ್ನು ಎದುರಿಸುವ ನಿಟ್ಟಿನಲ್ಲಿ ಹೊಸ ಭಾರತೀಯ ಅಪರಾಧ ಕಾನೂನುಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಹೇಳಿದರು.
ಯೇನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ವಿಧಿ ವಿಜ್ಞಾನ ವಿಭಾಗವು ಸೈಬರ್ ಕ್ರೈಂ ಮತ್ತು ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ಹಮ್ಮಿಕೊಂಡ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಇತ್ತೀಚೆಗೆ ಜಾರಿಗೆ ಬಂದ ಭಾರತೀಯ ನ್ಯಾಯ ಸಂಹಿತಾ 2023, ಭಾರತೀಯ ಸಾಕ್ಷಿ ಅಧಿನಿಯಮ 2023 ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ 2023 ಮೇಲೆ ಬೆಳಕು ಚೆಲ್ಲಲಾಯಿತು.
ಮಂಗಳೂರು ಸಿಸಿಬಿ ಉಪ ಆಯುಕ್ತೆ ಗೀತಾ ಕುಲಕರ್ಣಿ ಅವರು ಮಾತನಾಡಿ, ಸೈಬರ್ ಅಪರಾಧ ಮಂಗಳೂರಿನಲ್ಲೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರತಿಯೊಬ್ಬರೂ ಜಾಗೃತಿ ಹೊಂದುವುದು ಅವಶ್ಯ ಎಂದರು.
ಖಾಸಗಿ ಬಸ್‌ನಲ್ಲಿ ಅಸ್ವಸ್ಥೆಗೊಳಗಾದ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದ ಫೋರೆನ್ಸಿಕ್ ವಿಭಾಗದ ನಾಲ್ವರು ವಿದ್ಯಾರ್ಥಿಗಳಾದ ಅನೋವಾ ಸುನಿಲ್, ದೇವಪ್ರಿಯಾ ಬಿ ಎಸ್, ಭಾಗ್ಯ ಮಿತ್ರ ಮತ್ತು ಶಾನಿ ಕೆ.ಪಿ. ಅವರನ್ನು ಸನ್ಮಾನಿಸಲಾಯಿತು.
ಯೇನೆಪೋಯ ಡೀಮ್ಸ್ ವಿವಿ ಕುಲಪತಿ ಪ್ರೊ.ಬಿ.ಎಚ್.ಶ್ರೀಪತಿ ರಾವ್ ಅಧ್ಯಕ್ಷತೆ ವಹಿಸಿದ್ದರು. ಸೈಬರ್ ಭದ್ರತಾ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಶಿಕ್ಷಣ ನೀಡುವಲ್ಲಿ ಶೈಕ್ಷಣಿಕ ಸಂಸ್ಥೆಗಳು ಮುಖ್ಯ ಪಾತ್ರವನ್ನು ವಹಿಸುವ ಅಗತ್ಯತೆ ಇದೆ ಎಂದರು.
ಪ್ರಾಂಶುಪಾಲ ಡಾ.ಅರುಣ್ ಎ. ಭಾಗವತ್, ಉಪ ಪ್ರಾಂಶುಪಾಲೆ ಡಾ.ಶರೀನಾ ಪಿ., ಡಾ.ಜೀವನ್‌ರಾಜ್ ಮತ್ತು ನಾರಾಯಣ ಸುಕುಮಾರ ಎ. ಉಪಸ್ಥಿತರಿದ್ದರು.