

ಮಂಗಳೂರು: ದೇಶದ ಹಲವಾರು ಕಲೆಗಳಲ್ಲಿ ಯಕ್ಷಗಾನವು ಅಗ್ರಸ್ಥಾನ ಪಡೆದಿದೆ. ನೃತ್ಯ, ಸಾಹಿತ್ಯ, ಹಿಮ್ಮೇಳಗಳಿಂದ ಕೂಡಿದ ಶ್ರೀಮಂತ ಕಲೆಯಾಗಿದ್ದು, ವಿಶ್ವದಲ್ಲಿಯೇ ಸಶಕ್ತ - ಸಧೃಡ ಕಲೆಯಾಗಿದೆ. ರಾಜಕಲೆಯಾದ ಇದನ್ನು ರಾಜಾಶ್ರಯದಿಂದ ಬೆಳೆಸೋಣ ಎಂದು ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಮಂಗಳಾದೇವಿಯಲ್ಲಿ ನಡೆಯುತ್ತಿರುವ ಅಲೆವೂರಾಯ ಪ್ರತಿಷ್ಠಾನದ ಎಂಟನೇ ವರ್ಷದ ಯಕ್ಷ ತ್ರಿವೇಣಿ ಉದ್ಘಾಟಿಸಿ ಮಾತನಾಡಿದ ಅವರು, ಮಂಗಳಾದೇವಿ ದೇವಳದ ಮೊಕ್ತೇಸರ ಅರುಣ್ ಐತಾಳರು ನಮ್ಮಂತಹಾ ದೇವಸ್ಥಾನಗಳಲ್ಲಿ ಇಂತಹಾ ಕಲಾಪ್ರಕಾರಗಳ ಪ್ರದರ್ಶನಕ್ಕೆ ಖಂಡಿತಾ ಅವಕಾಶವಿದೆ. ಅಲೆವೂರಾಯ ಸಹೋದರರ ಈ ಪ್ರಯತ್ನಕ್ಕೆ ಶ್ಲಾಘನೀಯ ಎಂದರು.
ಅಲೆವೂರಾಯ ಪ್ರತಿಷ್ಠಾನದ ಪ್ರಶಸ್ತಿ ಸ್ವೀಕರಿಸಿದ ಉಪನ್ಯಾಸಕ,ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ ಸುಜಯೀಂದ್ರ ಹಂದೆ ಮಾತನಾಡಿ, ನಮ್ಮ ಮಕ್ಕಳ ಮೇಳದಂತೆಯೇ ಇಲ್ಲಿಯೂ ಇದೆ. ಇದನ್ನು ನಾವು ದೇವರ ಕಲೆ ಎಂದು ಆರಾಧಿಸುತ್ತೇವೆ. ಹಾಗಾಗಿ ಈ ಸನ್ಮಾನ ನನಗೆ ದೊರೆತಿರುವುದು ತುಂಬಾ ಸಂತಸದ ವಿಷಯ ಎಂದರು.
ಕರ್ಣಾಟಕ ಬ್ಯಾಂಕ್ ನ ನಿವೃತ್ತ ಉದ್ಯೋಗಿ ಜನಾರ್ದನ ಹಂದೆ, ಉಪನ್ಯಾಸಕ ಬಾಲಕೃಷ್ಣ ಶೆಟ್ಟಿ, ಹಿಮ್ಮೇಳ ಕಲಾವಿದ ವೇಣುಗೋಪಾಲ ಮಾಂಬಾಡಿ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು. ಪ್ರತಿಷ್ಠಾನದ ವಿಶ್ವಸ್ಥ ವರ್ಕಾಡಿ ರವಿ ಅಲೆವೂರಾಯ ಪ್ರಸ್ತಾವನೆಗೈದರು. ಸುಧಾಕರ ರಾವ್ ಪೇಜಾವರ ನಿರೂಪಿಸಿದರು. ಮಧುಸೂದನ ಅಲೆವೂರಾಯ ವರ್ಕಾಡಿ ವಂದಿಸಿದರು.