

ಮಂಗಳೂರು: ಸಂಗೀತ, ಸಾಹಿತ್ಯ, ನೃತ್ಯ, ಯಕ್ಷಗಾನಗಳೆಲ್ಲವೂ ನಮ್ಮ ಜೀವನಕ್ಕೆ ಆನಂದ ನೀಡುವ ಕಲೆ ಎಂದು ಎನ್‌ಐಟಿಕೆಯ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಪ್ರೊ.ಎ.ಚಿತ್ತರಂಜನ್ ಹೇಳಿದರು.
ನಗರದ ಪುರಭವನದಲ್ಲಿ ಜರುಗಿದ ಯುಕ್ಷನಂದನ ಪಿ.ವಿ.ಐತಾಳರ ಆಂಗ್ಲ ಭಾಷಾ ತಂಡದ 43ನೇ ವರ್ಷಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯಕ್ಷಗಾನದಂತಹಾ ಕಲೆಗಳು ನಮ್ಮಲ್ಲಿನ ಲವಲವಿಕೆಯನ್ನು ಉಜ್ವಲಗೊಳಿಸಿ, ಬದುಕಿಗೆ ಅರ್ಥ ತುಂಬುತ್ತವೆ. ಶಾಸಕರಾಗಿ, ನ್ಯಾಯವಾದಿಗಳಾಗಿ ಮೆರೆದ ಐತಾಳರು ಆಂಗ್ಲ ಭಾಷಾ ಯಕ್ಷಗಾನದ ಪ್ರಮುಖ ರೂವಾರಿ. ನಲವತ್ತಮೂರು ವರ್ಷಗಳ ಈ ಇಂಗ್ಲಿಷ್ ಯಾನ ಅಭೂತಪೂರ್ವವಾದುದು. ಅವರ ನಂತರವೂ ಅವರ ಮಕ್ಕಳು ಅದನ್ನು ಮುಂದುವರಿಸಿಕೊಂಡು ಯಕ್ಷಕ್ರಾಂತಿಯನ್ನುಂಟು ಮಾಡಿದ್ದಾರೆ ಎಂದರು.
ಕಲಾವಿದ ಕುಂಬ್ಳೆ ಶ್ರೀಧರ ರಾವ್ ಕಾರ್ಯಕ್ರಮ ಉದ್ಘಾಟಿಸಿದರು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ರಾಜಮಣಿ ಎ., ಶ್ರೀಧರ ಐತಾಳ್ ಮುಖ್ಯ ಅತಿಥಿಗಳಾಗಿದ್ದರು.
ಯಕ್ಷ ನಂದನದ ಸಂಚಾಲಕ ಸಂತೋಷ್ ಐತಾಳರು ಪ್ರಸ್ತಾವನೆಗೈದು ಯಕ್ಷ ನಂದನದ ಬೆಳವಣಿಗೆಗಳ ಬಗ್ಗೆ ತಿಳಿಸಿದರು. ಡಾ. ಸತ್ಯಮೂರ್ತಿ ಐತಾಳರು ಸ್ವಾಗತಿಸಿದರು. ಬಳಿಕ ಸುರೇಶ್ ಕುಮಾರ್ ಐತಾಳರಿಗೆ ನುಡಿನಮನ ಸಲ್ಲಿಸಿದರು.
ಐತಾಳರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದರು. ಅನಘಾ ಐತಾಳ್, ವೈಷ್ಣವಿ ಐತಾಳ್, ಪ್ರತೀಕ್ಷಾ ಬಿ ವಿ ಯವರನ್ನು ವೆಂಕಟರತ್ನ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾನಿಧಿ ಸಹಕಾರವೂ ನಡೆಯಿತು. ಯಕ್ಷ ನಂದನದ ಹಿರಿಯ ಬಣ್ಣದ ವೇಷಧಾರಿ ಪಿ.ನಾಗೇಶ ಕಾರಂತ ವಂದಿಸದಿರು. ಬಳಿಕ ವಕೀಲ ಪಿ. ಸಂತೋಷ ಐತಾಳರು ಬರೆದ ಸೀತಾಪಹಾರ - ಜಟಾಯು ಮೋಕ್ಷ ಎಂಬ ಆಂಗ್ಲ ಭಾಷೆಯ ಯಕ್ಷಗಾನ ಬಯಲಾಟ ಜರಗಿತು.