ಮಂಗಳೂರು ಇನ್ನು ಹಣ್ಣುಗಳ ನಗರ, ಮುಡಾ-ಪರಿಸರ ಪ್ರೇಮಿಗಳಿಂದ ಯೋಜನೆ

Fruits
Published on

ಹರೀಶ್ ಮೋಟುಕಾನ ಮಂಗಳೂರು

ಮಹಾನಗರವನ್ನು ಹಣ್ಣುಗಳ ನಗರ ಮಾಡಲು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಹಾಗೂ ಪರಿಸರ ಪ್ರೇಮಿ ಸಂಘಟನೆ ಜತೆಗೂಡಿ ಯೋಜನೆ ರೂಪಿಸಿದ್ದು, ಮುಂದಿನ ಮಳೆಗಾಲದಲ್ಲಿ ಅನುಷ್ಠಾನಗೊಳ್ಳಲಿದೆ.

ನಗರದ ಕೆಲವು ಕಡೆ ಹಸಿರು ಪ್ರದೇಶ ಗಣನೀಯ ಕಡಿಮೆಯಾಗಿದೆ. ಇದನ್ನು ಸರಿದೂಗಿಸಲು ನಗರ ಅರಣ್ಯೀಕರಣ ಮಾಡಲು ಆಸಕ್ತಿ ವಹಿಸಲಾಗಿದೆ. ಇದಕ್ಕಾಗಿ ನಗರದ ಗ್ಲೋಬಲ್‌ಗ್ರೀನ್ ಟೈಗರ್ಸ್‌ ಸಂಸ್ಥೆ ಕೈ ಜೋಡಿಸಿದೆ.

ಮೊದಲ ಹಂತದಲ್ಲಿ ಕನಿಷ್ಠ 6 ರಿಂದ 7 ಜಾತಿಯ ಹಣ್ಣಿನ ಗಿಡಗಳನ್ನು ನೆಡಲು ಯೋಜನೆ ರೂಪಿಸಲಾಗಿದೆ. ಪುನರ್ಪುಳಿ, ನೆಲ್ಲಿಕಾಯಿ, ಜಂಬು ನೇರಳೆ, ಬಿಂಬುಳಿ, ಧಾರೆಹುಳಿ, ಹುಣಸೆಹುಳಿ ಮೊದಲಾದ ಹಣ್ಣಿನ ಗಿಡಗಳನ್ನು ಬೆಳೆಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಮಂಗಳೂರು ಸ್ಮಾರ್ಟ್ ಸಿಟಿ ಹಾಗೂ ಮಹಾನಗರಪಾಲಿಕೆ ಜತೆ ಮಾತುಕತೆ ನಡೆಸಲಾಗಿದೆ. ಮುಂದಿನ ಮಳೆಗಾಲದಲ್ಲಿ ಗಿಡಗಳನ್ನು ನೆಡಲು ಅಗತ್ಯ ಸಿದ್ಧತೆ ನಡೆಯುತ್ತಿದೆ ಎಂದು ಮುಡಾ ಅಧ್ಯಕ್ಷ ರವಿಶಂಕರ ಮಿಜಾರ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

8 ವಾರ್ಡ್‌ಗಳಲ್ಲಿ ಶೇ.13 ಹಸಿರು ಪರಿಸರ:  ಪಾಲಿಕೆ ವ್ಯಾಪ್ತಿಯಲ್ಲಿ ಹಸಿರು ಪರಿಸರ ಕಡಿಮೆಯಾಗುತ್ತಿದೆ. ರಾಷ್ಟ್ರೀಯ ಮಾನದಂಡದಂತೆ ಶೇ.33ರಷ್ಟು ಹಸಿರು ಪ್ರದೇಶ ಇರಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ಶೇ.24ರಷ್ಟು ಹಸಿರು ಪ್ರದೇಶ ಇದೆ. ನಗರದ 8 ವಾರ್ಡ್‌ಗಳಲ್ಲಿ ಶೇ.13ರಷ್ಟು ಮಾತ್ರ ಹಸಿರು ಪ್ರದೇಶವಿದೆ. ಇದನ್ನು ಸಮತೋಲನಗೊಳಿಸಬೇಕಾದರೆ ಲಭ್ಯವಿರುವ ಸ್ಥಳಗಳಲ್ಲಿ ಗಿಡ ಬೆಳೆಸುವುದು ಅನಿವಾರ್ಯ. ಹಾಗಾಗಿ ಮಿಯಾವಾಕಿ ಮಾದರಿಯ ಕಡಿಮೆ ಸ್ಥಳದಲ್ಲಿ ಹೆಚ್ಚು ಗಿಡ ಬೆಳೆಸುವ ರೀತಿ ಅರಣ್ಯ ಬೆಳೆಸಲು ನಿರ್ಧರಿಸಲಾಗಿದೆ. ಹಣ್ಣಿನ ಗಿಡಗಳನ್ನು ಬೆಳೆಸಿದರೆ ಹೆಚ್ಚು ಪ್ರಯೋಜನವಿರುವುದರಿಂದ ಮತ್ತು ನಗರಕ್ಕೆ ವಿಶಿಷ್ಟ ಮೆರುಗು ಬರುವುದರಿಂದ ಹಣ್ಣಿನ ಗಿಡಗಳಿಗೆ ಪ್ರಾಶಸ್ತ್ಯ ನೀಡಲಾಗುವುದು. ಪ್ರಮುಖ ವೃತ್ತಗಳಿಂದ ಹಾದು ಹೋಗುವ ರಸ್ತೆಗಳ ಬದಿಗಳಲ್ಲಿ ಲಭ್ಯ ಸ್ಥಳದಲ್ಲಿ ಸುಮಾರು 100 ಮೀಟರ್ ತನಕ ಇಂತಹ ಗಿಡ ಬೆಳೆಸಲು ನಿರ್ಧರಿಸಲಾಗಿದೆ.

ಕೆರೆಗಳ ಬಳಿ ಹಣ್ಣಿನ ಗಿಡ: ನಗರ ವ್ಯಾಪ್ತಿಯಲ್ಲಿ 80ರಷ್ಟು ಕೆರೆಗಳಿದ್ದು, ಹಂತ ಹಂತವಾಗಿ ಇವುಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಸಂದರ್ಭ ದೊಡ್ಡ ಕೆರೆಗಳ ಬಳಿ ಸುಮಾರು 50 ಸೆಂಟ್ಸ್ ಜಾಗದಲ್ಲಿ ಹಣ್ಣಿನ ಗಿಡ ಬೆಳೆಸುವ ಯೋಜನೆ ಇದೆ. ಈಗಾಗಲೇ ಪಡೀಲ್ ಬೈರಾಡಿ ಕೆರೆ ಬಳಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ವೆಲೆನ್ಸಿಯಾ ಪ್ರದೇಶದಲ್ಲೂ ಗಿಡ ನೆಡಲು ಜಾಗ ನೀಡುವಂತೆ ಪಾಲಿಕೆಗೆ ಮನವಿ ಮಾಡಲಾಗಿದೆ ಎಂದು ಮಿಜಾರ್ ತಿಳಿಸಿದ್ದಾರೆ.

ಮಂಗಳೂರು ನಗರದಲ್ಲಿ ಮೂಲ ಸೌಲಭ್ಯಗಳು ಅಭಿವೃದ್ಧಿ ಹೊಂದುತ್ತಿರುವ ನಡುವೆಯೇ ಹಸಿರು ಪರಿಸರ ನಾಶವಾಗುತ್ತಿದೆ. ಇದನ್ನು ಸರಿದೂಗಿಸಲು ಹಣ್ಣಿನ ಗಿಡಗಳನ್ನು ನೆಡಲು ಯೋಜನೆ ರೂಪಿಸಲಾಗಿದೆ. ಗ್ರೀನ್ ಟೈಗರ್ಸ್‌ ಜತೆ ಎರಡು ಬಾರಿ ಸಭೆ ನಡೆಸಿ ಚರ್ಚೆ ನಡೆಸಿದ್ದೇವೆ. ಮಳೆಗಾಲದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ರವಿಶಂಕರ ಮಿಜಾರ್, ಮುಡಾ ಅಧ್ಯಕ್ಷ ಮಂಗಳೂರು ನಗರವನ್ನು ಹಣ್ಣಿನ ನಗರವನ್ನಾಗಿಸುವುದು ಉತ್ತಮ ಯೋಜನೆ. ಆದರೆ ಸೂಕ್ತ ಜಾಗದ ಕೊರತೆ ಎದುರಾಗಿದೆ. ನಗರದ ಜನತೆ, ಮಹಾನಗರ ಪಾಲಿಕೆ, ಸರ್ಕಾರಿ ಕಚೇರಿಗಳು ಸ್ವಯಂಪ್ರೇರಿತವಾಗಿ ಹಣ್ಣಿನ ಗಿಡಗಳನ್ನು ನೆಡಲು ಅವಕಾಶ ಕಲ್ಪಿಸಬೇಕು. ಆಗ ಯೋಜನೆ ಯಶಸ್ವಿಯಾಗಲು ಸಾಧ್ಯ. ಮಾಧವ ಉಳ್ಳಾಲ, ಪರಿಸರ ಪ್ರೇಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net