

ಮಂಗಳೂರು: ಯೂನಿವರ್ಸಲ್ ನಾಲೆಡ್ಜ್ ಟ್ರಸ್ಟ್ ಮತ್ತು ಗ್ರಾಮ ವಿಕಾಸ ಸೊಸೈಟಿ ಇವರ ಸಂಯೋಜನೆಯಲ್ಲಿ ‘ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಹಸಿದವರಿಗೆ ಅನ್ನ’ ಎಂಬ ಘೋಷ ವಾಕ್ಯದೊಂದಿಗೆ ಫುಡ್ ಆನ್ ವ್ಹೀಲ್ಸ್ ಎಂಬ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಟ್ರಸ್ಟ್‌ನ ಕೋಶಾಧಿಕಾರಿ ಗಣೇಶ್ ಪ್ರಸಾದ್ ಉದ್ಘಾಟಿಸಿದರು. ಪರಿಸರವಾದಿ ಶಶಿಧರ್ ಶೆಟ್ಟಿ, ಉದ್ಯಮಿಗಳಾದ ಅಶೋಕ್ ಹಾಗೂ ನರೇಶ್, ಟ್ರಸ್ಟಿ ದಿನಕರ ಶೆಟ್ಟಿ, ಮೋಹಿನಿ ಶಿರಿ, ಸಪ್ನ ನರೇಶ್, ಸ್ವರ್ಣ ಅಶೋಕ್, ಮಾಧವ ಭಂಡಾರಿ ಮತ್ತು ಸದಸ್ಯರಾದ ಅನನ್ಯಾ ಭಂಡಾರಿ ಉಪಸ್ಥಿತರಿದ್ದರು.
ಫಲಾನುಭವಿ ಬಸವಣ್ಣ ಅವರು ಮೊದಲ ಭೋಜನ ಸ್ವೀಕರಿಸಿದರು. ರಾಜ್ಯದ ವಿವಿಧ ನಗರಗಳಲ್ಲಿ ಫುಡ್ ಆನ್ ವಾಲ್ ಯೋಜನೆಯಡಿಯಲ್ಲಿ ಹೋಟೆಲ್ ಪಾಲುದಾರರ ಮೂಲಕ 50 ಸಾವಿರಕ್ಕಿಂತಲೂ ಹೆಚ್ಚು ಜನರಿಗೆ ಈಗಾಗಲೇ ಹಸಿದವರಿಗೆ ಅನ್ನವನ್ನು ಉಚಿತವಾಗಿ ನೀಡುತ್ತಿದ್ದು ಅದರ ಯಶಸ್ವಿಯ ಆಧಾರದಲ್ಲಿ ಫುಡ್ ಆನ್ ವೀಲ್ಸ್ ನಿರ್ಮಾಣವಾಗಿದೆ. ಈಗಾಗಲೇ ಧಾರವಾಡದಲ್ಲಿ ಫುಡ್ ಆನ್ ವೀಲ್ಸ್ ಕಾರ್ಯನಿರ್ವಹಿಸುತ್ತಿದೆ. ವಿಶೇಷವಾಗಿ ವಿನ್ಯಾಸಗೊಳಿಸಿದ ವಾಹನವು ಮಂಗಳೂರಿನ ವಿವಿಧ ಭಾಗಗಳಲ್ಲಿ ಪ್ರತಿದಿನ ಉಚಿತ ಊಟವನ್ನು ವಿತರಿಸುತ್ತದೆ. ಆಸಕ್ತ ದಾನಿಗಳ ಸಹಾಕಾರದೊಂದಿಗೆ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಗೆ ಕೈಜೋಡಿಸಲು ವಸ್ತು ಅಥವಾ ಧನ ಸಹಾಯದ ಮೂಲಕ ಸಹಕರಿಸಬಹುದು, ಕಾರ್ಯಕರ್ತರಾಗಿಯೂ ಸೇವೆ ಸಲ್ಲಿಸಬಹುದು.
ಬಡವರಿಗೆ ಸೇವೆ ಸಲ್ಲಿಸುವ ಉದ್ದೇಶದಿಂದ ಮಂಗಳೂರಿನಲ್ಲಿ ಫುಡ್ ಆನ್ ವೀಲ್ಸ್ ಅನ್ನು ಆರಂಭಿಸಿದ್ದೇವೆ. ಹಸಿವು ಮುಕ್ತ ಸಮಾಜ ನಿರ್ಮಾಣ ನಮ್ಮ ಧ್ಯೇಯವಾಗಿದೆ. ಸಂಸ್ಥಾಪಕರಾದ ರೋಹನ್ ಶಿರಿ ಮತ್ತು ಶಮ್ಮಿ ಶಿರಿ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದೆ.
ಗಣೇಶ್ ಪ್ರಸಾದ್
ಟ್ರಸ್ಟಿ