

ಮಂಗಳೂರು: ನಗರದಲ್ಲಿ ಕಂಡು ಬಂದ ಉಗ್ರ ಸಂಘಟನೆ ಪರ ಗೋಡೆ ಬರಹ ಪ್ರಕರಣದಲ್ಲಿ ನಾಲ್ಕನೇ ವ್ಯಕ್ತಿಯ ಬಂಧನಕ್ಕಾಗಿ ಕಾರ್ಯಾಚರಣೆ ಆರಂಭವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತೀರ್ಥಹಳ್ಳಿ ನಿವಾಸಿ ಮಹಮ್ಮದ್ ಶಾರೀಕ್(22) ಮತ್ತು ಮಾಝ್ ಮುನೀರ್(21) ಮತ್ತು ಸಾದತ್(50) ಎಂಬುವರನ್ನು ಬಂಧಿಸಲಾಗಿದೆ. ಈ ಪೈಕಿ ಪೊಲೀಸ್ ಕಸ್ಟಡಿಯಲ್ಲಿರುವ ಶಾರೀಕ್ ಮತ್ತು ಮುನೀರ್‌ನನ್ನು ನಾಲ್ಕು ದಿನಗಳಿಂದ ವಿಚಾರಣೆ ನಡೆಸಲಾಗುತ್ತಿದ್ದು, ಹಲವು ಮಾಹಿತಿ ಬಾಯ್ಬಿಟ್ಟಿದ್ದಾರೆ. ಇನ್ನೋರ್ವ ಆರೋಪಿ ಸಾದತ್‌ಗೆ ಕರೊನಾ ನೆಗೆಟಿವ್ ಬಂದಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಗೋಡೆ ಬರಹದಲ್ಲಿ ಉಗ್ರ ಸಂಘಟನೆಗಳನ್ನು ಬೆಂಬಲಿಸಿರುವುದು ಸ್ಪಷ್ಟವಾಗಿರುವುದರಿಂದ ಆರೋಪಿಗಳಿಗೆ ಉಗ್ರ ಸಂಘಟನೆಗಳ ಸಂಪರ್ಕ ಇದೆಯೇ ಎನ್ನುವ ದಿಕ್ಕಿನಲ್ಲಿ ಮುಖ್ಯ ತನಿಖೆ ನಡೆಯುತ್ತಿದೆ. ಪ್ರಸ್ತುತ ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಈ ವಿಚಾರ ಗೊತ್ತಾಗಲಿದೆ. ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಸಾಕ್ಷೃಗಳ ಹುಡುಕಾಟ ನಡೆದಿದೆ. ಪ್ರತ್ಯಕ್ಷ ಸಾಕ್ಷಿ ಇಲ್ಲದಿದ್ದರೆ ತಾಂತ್ರಿಕ ಸಾಕ್ಷೃ ಕೂಡ ಮಹತ್ವದ್ದಾಗಿದ್ದು, ಅವುಗಳನ್ನೂ ಕಲೆಹಾಕಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬೇರೆ ಯಾವುದೇ ತನಿಖಾ ತಂಡಗಳು ನಮ್ಮಿಂದ ಮಾಹಿತಿ ಕೇಳಿಲ್ಲ. ರಾಷ್ಟ್ರೀಯ ತನಿಖಾ ದಳ ಅಥವಾ ಕೇಂದ್ರ ಗುಪ್ತಚರ ಇಲಾಖೆ ಪ್ರಕಣದ ಕುರಿತಂತೆ ತೊಡಗಿಸಿಕೊಂಡಿರುವ ಕುರಿತೂ ಯಾವುದೇ ಮಾಹಿತಿಯಿಲ್ಲ. ಎನ್‌ಐಎಗೆ ವಹಿಸಿದರೂ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಮಹಾರಾಷ್ಟ್ರದಲ್ಲಿ ತನಿಖಾ ತಂಡ: ಬಂಧಿತರಾಗಿರುವ ಮೊದಲಿಬ್ಬರು ಆರೋಪಿಗಳು ಸದಸ್ಯರಾಗಿದ್ದ ವಾಟ್ಸಾೃಪ್ ಗ್ರೂಪ್ ಅಡ್ಮಿನ್ ಪ್ರಕರಣದ ನಾಲ್ಕನೇ ಆರೋಪಿ. ಆತ ಪುಣೆ ಮೂಲದವನಾಗಿದ್ದು, ಬಂಧನಕ್ಕೆ ಈಗಾಗಲೇ ನಗರ ಅಪರಾಧ ಪತ್ತೆ ದಳ(ಸಿಸಿಬಿ) ಪೊಲೀಸರ ತಂಡ ಈಗಾಗಲೇ ಮಹಾರಾಷ್ಟ್ರಕ್ಕೆ ತೆರಳಿದೆ. ಇನ್ನೊಂದೆಡೆ ಪ್ರಕರಣದ ಪ್ರಧಾನ ಆರೋಪಿ ಮಹಮ್ಮದ್ ಶಾರೀಕ್‌ಗೆ ಸೌದಿಯಿಂದ ಪರಿಚಯದ ವ್ಯಕ್ತಿಯೊಬ್ಬ ಕರೆ ಮಾಡಿ ಮಂಗಳೂರು ನಗರದಲ್ಲಿ ಸಂಚಲನ ಮೂಡಿಸುವ ದುಷ್ಕೃತ್ಯ ನಡೆಸುವಂತೆ ಪ್ರಚೋದನೆ ನೀಡಿದ್ದಾನೆ. ಆತ ಸಂಘಟನೆಯೊಂದರಲ್ಲಿ ಗುರುತಿಸಿಕೊಂಡಿದ್ದು, ಆತನಿಗೆ ಮಂಗಳೂರಿನಿಂದ ಕರೆ ಹೋಗಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಮಂಗಳೂರು ನಗರದಲ್ಲಿ ಖಾಸಗಿ ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಿಸಿ 18,500 ಸಿಸಿಟಿವಿ ಕ್ಯಾಮರಾಗಳಿವೆ. ಇವೆಲ್ಲ ಪಬ್ಲಿಕ್ ಸೇಫ್ಟಿ ಆ್ಯಕ್ಟ್ ಅಡಿಯಲ್ಲಿ ಬರುತ್ತದೆ. ಇವೆಲ್ಲ ಸರಿಯಾಗಿ ಕಾರ್ಯನಿರ್ವಹಿಸುವುದು ಅಗತ್ಯ. ಇಲಾಖೆ ಅಳವಡಿಸಿರುವ ಸಿಸಿ ಕ್ಯಾಮರಾಗಳು ತಿಂಗಳೊಳಗೆ ದುರಸ್ತಿಯಾಗಲಿವೆ. ನಗರದ ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ತೆರವುಗೊಳಿಸಿರುವ ಕ್ಯಾಮರಾಗಳನ್ನು ಕಾಮಗಾರಿ ಪೂರ್ಣಗೊಂಡ ತಕ್ಷಣ ಮತ್ತೆ ಅಳವಡಿಸುವಂತೆ ಮಹಾನಗರ ಪಾಲಿಕೆಗೂ ಮನವಿ ಮಾಡಲಾಗಿದೆ.
-ವಿಕಾಶ್ ಕುಮಾರ್, ಮಂಗಳೂರು ನಗರ ಪೊಲೀಸ್ ಆಯುಕ್ತ