

ಮಂಗಳೂರು: ಮಂಗಳೂರಲ್ಲಿ ಆತಂಕದ ವಾತಾವರಣ ಉಂಟು ಮಾಡಿದ್ದ ಉಗ್ರ ಸಂಘಟನೆ ಪರ ಗೋಡೆ ಬರಹ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಫುಡ್ ಡೆಲಿವರಿ ಬಾಯ್, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಮಾಝ್ ಅಹ್ಮದ್ (21) ಎಂಬಾತನನ್ನು ಗುರುವಾರ ಬೆಳಗ್ಗೆ ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಸಹಕರಿಸಿದ ಇನ್ನೋರ್ವನಿಗಾಗಿ ಶೋಧ ಮುಂದುವರಿದಿದೆ.
ನ.27ರಂದು ನಗರದ ಸರ್ಕ್ಯೂಟ್ ಹೌಸ್‌ನಿಂದ ಬಿಜೈ ಕಡೆಗೆ ಹೋಗುವ ರಸ್ತೆಯ ಕದ್ರಿ ಕಂಬಳ ಕ್ರಾಸ್‌ನಲ್ಲಿರುವ ಅಪಾರ್ಟ್‌ಮೆಂಟ್ ಆವರಣ ಗೋಡೆಯಲ್ಲಿ ‘ಡು ನಾಟ್ ಫೋರ್ಸ್ ಅಸ್ ಟು ಇನ್ವೈಟ್ ಲಷ್ಕರ್ ಇ ತೊಯ್ಬ ಆ್ಯಂಡ್ ತಾಲಿಬಾನ್ ಟು ಡೀಲ್ ವಿದ್ ಸಂಘೀಸ್ ಆ್ಯಂಡ್ ಮ್ಯಾನ್ವೆಡಿಸ್’ ಹಾಗೂ ಇದರ ಕೆಳಗೆ ಹ್ಯಾಷ್ ಟ್ಯಾಗ್ ಹಾಕಿ ‘ಲಷ್ಕರ್ ಜಿಂದಾಬಾದ್’ (ನಮ್ಮನ್ನು ವಿಧ್ವಂಸಕ ಕೃತ್ಯ ನಡೆಸಲು ಉತ್ತೇಜಿಸಬೇಡಿ. ಲಷ್ಕರ್ ಇ ತೊಯ್ಬ ಮತ್ತು ತಾಲಿಬಾನ್‌ಗಳಿಗೆ ಸಂಘಿಗಳನ್ನು ಯಾವ ರೀತಿ ನೋಡಿಕೊಳ್ಳಬೇಕು ಎನ್ನುವುದು ತಿಳಿದಿದೆ) ಎಂದು ಬರೆಯಲಾಗಿತ್ತು.
ನ.29ರಂದು ಮಂಗಳೂರು ನ್ಯಾಯಾಲಯ ಆವರಣದಲ್ಲಿರುವ ಪೊಲೀಸ್ ಹೊರ ಠಾಣೆಯ ಹಳೇ ಕಟ್ಟಡದ ಗೋಡೆಯಲ್ಲಿ ಉರ್ದು ಭಾಷೆಯಲ್ಲಿ ‘ಎ್ಠಠ್ಠಿ ಛಿ ್ಕಟಟ್ಝ ಛಿ ಜಿ ಚ್ಢ ಚ್ಟ ಠಿಚ್ಞ ್ಜ್ಠ’ ಅಂದರೆ, ‘ಪೈಗಂಬರ್‌ಗೆ ಕೋಪ ಬಂದರೆ ಒಂದೇ ಶಿಕ್ಷೆ, ತಲೆ ದೇಹದಿಂದ ಬೇರ್ಪಡುವುದು’ ಎಂದು ಬರೆಯಲಾಗಿತ್ತು.
ಉಗ್ರ ಪರ ಬರಹ ಕಾಣಿಸಿದ ಹಿನ್ನೆಲೆಯಲ್ಲಿ ಕದ್ರಿ ಹಾಗೂ ಬಂದರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದರು. ಇದೊಂದು ಗಂಭೀರ ಪ್ರಕರಣವಾದ ಕಾರಣ ದುಷ್ಕರ್ಮಿಗಳ ಪತ್ತೆಗೆ ಎಸಿಪಿ ಸೆಂಟ್ರಲ್ ಜಗದೀಶ್, ಕದ್ರಿ ಇನ್‌ಸ್ಪೆಕ್ಟರ್ ಸವಿತ್ರತೇಜ ಹಾಗು ಸಿಸಿಬಿ ಇನ್‌ಸ್ಪೆಕ್ಟರ್ ಮಹೇಶ ಪ್ರಸಾದ್ ನೇತೃತ್ವದಲ್ಲಿ ಪ್ರತ್ಯೇಕ ತನಿಖಾ ತಂಡ ರಚಿಸಲಾಗಿತ್ತು. ದೇಶದ್ರೋಹಿ ಬರಹ ಬರೆದ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಸರ್ಕಾರದಿಂದಲೂ ಪೊಲೀಸರಿಗೆ ಒತ್ತಡ ಬಂದಿತ್ತು.
ಮೊಬೈಲ್ ಟವರ್ ಬಳಸಿ ಪತ್ತೆ
ದುಷ್ಕರ್ಮಿಗಳ ಪತ್ತೆಗೆ ಸಾಕಷ್ಟು ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ ಪೊಲೀಸರಿಗೆ ಪೂರಕ ಮಾಹಿತಿಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಮೊಬೈಲ್ ಟವರ್ ಲೊಕೇಶನ್ ಆಧಾರದಲ್ಲಿ ಆರೋಪಿಯನ್ನು ಪತ್ತೆ ಮಾಡಿದ್ದಾರೆ. ಸಿಸಿಬಿ ಹಾಗೂ ಕದ್ರಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದು, ಪ್ರಾಥಮಿಕ ವಿಚಾರಣೆ ವೇಳೆ ಕೃತ್ಯ ತಾನೇ ಎಸಗಿರುವುದನ್ನು ಒಪ್ಪಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ. ಬರಹ ಬರೆಯಲು ಪ್ರೇರಣೆ, ಕಾರಣ ಮೊದಲಾದ ವಿಷಯಗಳಿಗೆ ಸಂಬಂಧಿಸಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದ ಬಗ್ಗೆ ಪೊಲೀಸರು ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ.
ಫುಡ್ ಡೆಲಿವರಿ ಮಾಡಿಕೊಂಡಿದ್ದ!
ಆರೋಪಿ 2019ರ ಅಕ್ಟೋಬರ್‌ನಲ್ಲಿ ಆನ್‌ಲೈನ್ ಕಂಪನಿಯೊಂದಕ್ಕೆ ನಗರದಲ್ಲಿ ಫುಡ್ ಡೆಲಿವರಿ ಕೆಲಸಕ್ಕೆ ಸೇರಿದ್ದ. ಉಗ್ರ ಗೋಡೆ ಬರಹ ಕೃತ್ಯ ನಡೆಸಿದ ಬಳಿಕವೂ ಈತ ಏನೂ ಆಗಿಲ್ಲವೆಂಬಂತೆ ಫುಡ್ ಡೆಲಿವರಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದ.
ಉಗ್ರ ಗೋಡೆ ಬರಹ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ರೀತಿ ಘಟನೆ ಮರುಕಳಿಸದಂತೆ ಪೊಲೀಸ್ ಬೀಟ್ ಹೆಚ್ಚಿಸಲು ಸೂಚನೆ ನೀಡಲಾಗಿದೆ. ಡಿಸಿಪಿ ಮಟ್ಟದ ಅಧಿಕಾರಿಗಳನ್ನು ರಾತ್ರಿ ಬೀಟ್‌ಗೆ ಹಾಕಲು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಗರದ ಕತ್ತಲ ಪ್ರದೇಶಗಳಲ್ಲಿ ದಾರಿದೀಪದ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ 1,500 ಸಿಸಿಟಿವಿ ಕ್ಯಾಮೆರಾ ಪಡೆದುಕೊಳ್ಳಲು ತೀರ್ಮಾನಿಸಲಾಗಿದೆ. ಅವಶ್ಯವಾದರೆ ಕಂಪನಿಗಳಿಂದ ನೆರವು ಪಡೆದು ಸಿಸಿ ಕ್ಯಾಮರಾ ಅಳವಡಿಸಲಾಗುವುದು.
- ಬಸವರಾಜ ಬೊಮ್ಮಾಯಿ, ಗೃಹಸಚಿವ