ಹಣ, ಆಶ್ರಯ ನೀಡಿದವನ ಬಂಧನ, ಮಂಗಳೂರಿನಲ್ಲಿ ಉಗ್ರ ಪರ ಗೋಡೆ ಬರಹ ಪ್ರಕರಣ

Mangaluru wall writing
Published on

ಮಂಗಳೂರು: ನಗರದ ಬಿಜೈ ಮತ್ತು ಕೋರ್ಟ್ ಆವರಣದಲ್ಲಿ ಉಗ್ರ ಪರ ಗೋಡೆ ಬರಹ ಬರೆದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗಾಗಿ ನಾಲ್ಕು ದಿನಗಳ ಹಿಂದೆ ವಶಕ್ಕೆ ಪಡೆದಿದ್ದ ಆರೋಪಿಯನ್ನು ಶುಕ್ರವಾರ ಬಂಧಿಸಿರುವುದಾಗಿ ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ ಮೂರಕ್ಕೇರಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ನಿವಾಸಿ ಸಾದತ್(50) ಬಂಧಿತ. ಡಿ.5ರಂದು ತೀರ್ಥಹಳ್ಳಿ ನಿವಾಸಿಗಳಾದ ಮಹಮ್ಮದ್ ಶಾರೀಕ್(22), ಮಾಝ್ ಮುನೀರ್ ಅಹಮ್ಮದ್ ಯಾನೆ ಮುನೀರ್(21) ಎಂಬುವರನ್ನು ಬಂಧಿಸಲಾಗಿತ್ತು.

ಮೊಹಮ್ಮದ್ ಶಾರೀಕ್‌ನ ಚಿಕ್ಕಪ್ಪ ಸಾದತ್. ಕೃತ್ಯ ಎಸಗಿದ ಆರೋಪಿಗಳಿಗೆ ಹಣದ ಸಹಾಯ ಹಾಗೂ ಆಶ್ರಯ ನೀಡಿದ ಆರೋಪ ಈತನ ಮೇಲಿದೆ. ಸಾದತ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಎರಡು ದಿನಗಳ ಕಾಲ ಕೋವಿಡ್ ಪರೀಕ್ಷೆಗಾಗಿ ಪೊಲೀಸ್ ಕಸ್ಟಡಿಗೆ ನೀಡಿದೆ. ಕೋವಿಡ್ ಪರೀಕ್ಷೆ ಬಳಿಕ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ. ಮಹಮ್ಮದ್ ಶಾರೀಕ್ ಹಾಗೂ ಮಾಝ್ ಮುನೀರ್ ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿದ್ದು, ಅವರನ್ನು ಎಸಿಪಿ ಜಗದೀಶ್ ನೇತೃತ್ವದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪುಸ್ತಕ, ವಿಡಿಯೋ ಪತ್ತೆ: ಬಂಧಿತ ಆರೋಪಿಗಳಲ್ಲಿದ್ದ ಧರ್ಮಕ್ಕೆ ಸಂಬಂಧಿಸಿದ ವಿವಿಧ ಪುಸ್ತಕಗಳು, ಐಸಿಸ್ ಸಂಘಟನೆ ಪರ ಕೆಲಸ ಮಾಡುತ್ತಿದ್ದ ಜಾಗತಿಕ ಭಯೋತ್ಪಾದಕ ಜಮೈಕಾ ಮೂಲದ ಶೇಕ್ ಅಬ್ದುಲ್ಲಾ ಫೈಸಲ್‌ನ ಪ್ರಚೋದನಾಕಾರಿ ಭಾಷಣದ ವಿಡಿಯೋಗಳು ಲಭ್ಯವಾಗಿವೆ. ಈ ವಿಡಿಯೋಗಳ ಬಗ್ಗೆ ಆರೋಪಿಗಳು ಅಧ್ಯಯನ ನಿರತರಾಗಿದ್ದರು. ಇಸ್ಲಾಂ, ಕ್ರಿಶ್ಚಿಯನ್, ಹಿಂದು, ಬೌದ್ಧ ಧರ್ಮಕ್ಕೆ ಸೇರಿದ ಸುಮಾರು 150 ಪುಸ್ತಕಗಳನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ. ದುಷ್ಕೃತ್ಯ ನಡೆಸಲು ಹಣಕಾಸಿನ ಮೂಲದ ಬಗ್ಗೆಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.

ಮೂರು ತಿಂಗಳ ಹಿಂದೆಯೇ ಸಿದ್ಧತೆ: ಮಂಗಳೂರಿನಲ್ಲಿ ಭಯದ ವಾತಾವರಣ ಸೃಷ್ಟಿಸಿ ಜನರಲ್ಲಿ ಸಂಚಲನ ಉಂಟು ಮಾಡುವ ಕೃತ್ಯ ಮಾಡಲು ಸೂಚಿಸುವಂತೆ ಇಲ್ಲಿನ ವ್ಯಕ್ತಿಯೋರ್ವ ವಿದೇಶದಲ್ಲಿರುವ ವ್ಯಕ್ತಿಗೆ ಕರೆ ಮಾಡಿ ತಿಳಿಸಿರುವುದು ತನಿಖೆಯಲ್ಲಿ ಬಯಲಾಗಿದೆ. ವಿದೇಶದಲ್ಲಿರುವ ವ್ಯಕ್ತಿ ಅಂತರ್ಜಾಲ ಕರೆ ಮಾಡಿ ತೀರ್ಥಹಳ್ಳಿಯ ಮೊಹಮ್ಮದ್ ಶಾರೀಕ್‌ಗೆ ಗೋಡೆ ಬರಹ ಬರೆಯುವಂತೆ ಸೂಚಿಸಿದ್ದ. ಶಾರೀಕ್ ಮಾಝ್ ಅಹಮ್ಮದ್‌ನನ್ನು ಮನವೊಲಿಸಿ ಕೃತ್ಯಕ್ಕೆ ಬಳಸಿಕೊಂಡಿದ್ದ. ಮಂಗಳೂರಿನಿಂದ ವಿದೇಶಿ ವ್ಯಕ್ತಿಗೆ ಕರೆ ಮಾಡಿದವರು ಯಾರು ಎಂಬುದನ್ನು ಪತ್ತೆ ಮಾಡುವ ಮತ್ತೊಂದು ಸವಾಲು ಪೊಲೀಸರಿಗೆ ಎದುರಾಗಿದೆ. ಇದರ ಜತೆಗೆ ಪುಣೆಯ ವಾಟ್ಸಾೃಪ್ ಗ್ರೂಪ್ ಅಡ್ಮಿನ್ ಬಗ್ಗೆಯೂ ಮಾಹಿತಿ ಸಂಗ್ರಹಿಸಿ ಆತನನ್ನೂ ಬಂಧಿಸುವ ನಿಟ್ಟಿನಲ್ಲಿ ಪೊಲೀಸ್ ತನಿಖೆ ಸಾಗಿದೆ. ಮಂಗಳೂರು ನಗರದಲ್ಲಿ ಮೂರು ತಿಂಗಳ ಹಿಂದಿನಿಂದಲೇ ಕೃತ್ಯಕ್ಕೆ ಯೋಜನೆ ರೂಪಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹಿರಿಯ ಅಧಿಕಾರಿಗಳ ಸಭೆ: ಉಗ್ರ ಸಂಘಟನೆ ಪರ ಗೋಡೆ ಬರಹಕ್ಕೆ ಸಂಬಂಧಿಸಿದ ತನಿಖೆಯ ವಿಚಾರಕ್ಕೆ ಸಂಬಂಧಿಸಿ ನಗರ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ನೇತೃತ್ವದಲ್ಲಿ ಡಿಸಿಪಿಗಳಾದ ಹರಿರಾಂ ಶಂಕರ್ ಮತ್ತು ವಿನಯ ಗಾಂವ್‌ಕರ್, ಎಸಿಪಿ ಜಗದೀಶ್, ಸಿಸಿಬಿ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ಅವರನ್ನೊಳಗೊಂಡ ತಂಡ ಸಭೆ ನಡೆಸಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಇದರ ಜಾಲವನ್ನು ಬೇಧಿಸಲು ವಿವಿಧ ತಂತ್ರಗಳನ್ನು ರೂಪಿಸುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net