

ಮಂಗಳೂರು: ಕರಾವಳಿಯಾದ್ಯಂತ ದೇವಾಲಯಗಳಲ್ಲಿ, ಮನೆಗಳಲ್ಲಿ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬವನ್ನು ಶ್ರದ್ದೆ, ಭಕ್ತಿಯಿಂದ ಆಚರಿಸಲಾಯಿತು.
ಹೂವು, ಹಣ್ಣು ತರಕಾರಿ ದರ ಏರಿಕೆಯಾಗಿದ್ದರೂ ಮಹಿಳೆಯರು ಭಕ್ತಿಯಿಂದ ಹಬ್ಬ ಆಚರಿಸಿದರು. ‘ಕಮಲದಾ ಮೊಗದೋಳೆ ಕಮಲದಾ ಕಣ್ಣೋಳೆ ಕಮಲವಾ ಕೈಯಲ್ಲಿ ಹಿಡಿದೋಳೆ’ ಎಂಬ ಲಕ್ಷ್ಮೀ ಸ್ತುತಿ ಎಲ್ಲ ಕಡೆ ಕೇಳಿಬಂತು.
ಮಂಗಳೂರಿನ ಮಂಗಳಾದೇವಿ, ಉರ್ವ ಮಾರಿಯಮ್ಮ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ, ಕುದ್ರೋಳಿ ಶ್ರೀ ಭಗವತಿ ಕ್ಷೇತ್ರ ಮೊದಲಾದ ದೇವಾಲಯಗಳಲ್ಲಿ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ನಡೆಯಿತು. ಬೆಳಗ್ಗೆಯಿಂದಲೇ ಸಹಸ್ರಾರು ಮಹಿಳೆಯರು ವ್ರತಾಚರಣೆಯೊಂದಿಗೆ ದೇವಸ್ಥಾನಗಳಿಗೆ ಭೇಟಿ ನೀಡಿದರು.
ಖರೀದಿ ಭರಾಟೆ
ವರಮಹಾಲಕ್ಷ್ಮೀ ಹಬ್ಬದ ಸಂದರ್ಭ ಚಿನ್ನ, ಬೆಳ್ಳಿ, ವಜ್ರಾಭರಣ, ಉಡುಪು, ಗೃಹೋಪಯೋಗಿ, ಇಲೆಕ್ಟ್ರಾನಿಕ್ಸ್ ಉಪಕರಣ ಖರೀದಿಯೂ ಜೋರಾಗಿತ್ತು. ವಾಹನ ಖರೀದಿಯೂ ಹೆಚ್ಚಾಗಿದ್ದು, ದೇವಸ್ಥಾನಗಳಲ್ಲಿ ಪೂಜೆ ನಡೆಸುತ್ತಿರುವುದು ಕಂಡುಬಂತು. ಮನೆ ಮನೆಗಳಲ್ಲಿ ಸಿಹಿ ತಿಂಡಿ ವಿನಿಮಯ ಮಾಡಿಕೊಂಡರು.
ಹೂವು, ಹಣ್ಣು ಹೆಚ್ಚಿದ ಬೇಡಿಕೆ: ಮಾರುಕಟ್ಟೆಗಳಲ್ಲಿ ಗುರುವಾರ ಹೂವು, ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿತ್ತು. ಇದರಿಂದ ಸಹಜವಾಗಿಯೇ ದರವೂ ದುಬಾರಿಯಾಗಿತ್ತು. ಸಂಜೆಯ ವೇಳೆಗೆ ಹಲವು ಮಾರುಕಟ್ಟೆಗಳಲ್ಲಿ ಬಾಳೆಹಣ್ಣು ಖಾಲಿಯಾಗಿತ್ತು. ಉಳಿದಂತೆ ಪೂಜಾ ಸಾಮಗ್ರಿಗಳ ಖರೀದಿ ಜೋರಾಗಿತ್ತು.