

ಮಂಗಳೂರು: ನಗರದ ವಾಮಂಜೂರಿನಲ್ಲಿ ಸೆಕೆಂಡ್ ಸೇಲ್ ಅಂಗಡಿಯಲ್ಲಿ ಆಕಸ್ಮಿಕವಾಗಿ ಗುಂಡು ಹಾರಾಟ ನಡೆದು ಧರ್ಮಗುರು ಸ್ವಾನ್ ಎಂಬವರು ಗಾಯಗೊಂಡ ಪ್ರಕರಣದಲ್ಲಿ ಸುಳ್ಳು ಕಥೆ ಹೇಳಿ ದಾರಿ ತಪ್ಪಿಸುವ ಪ್ರಯತ್ನ ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ.
ಗಾಯಾಳು ಸಫ್ವಾನ್ ಪ್ರಾರಂಭದಲ್ಲಿ ಪ್ರಕರಣವನ್ನು ತಿರುಚಿ ‘ನಾನು ಗನ್ ಪರಿಶೀಲನೆ ನಡೆಸುವಾಗ ೈರಿಂಗ್ ಆಗಿ ಗಾಯಗೊಂಡಿರುವುದು’ ಎಂದು ಹೇಳಿದ್ದರು. ಆದರೆ ಪೊಲೀಸ್ ಸಿಬ್ಬಂದಿ ಗಂಭೀರವಾಗಿ ತನಿಖೆ ನಡೆಸಿದಾಗ ಪ್ರಕರಣದ ಸತ್ಯಾಸತ್ಯತೆ ಗೊತ್ತಾಗಿದೆ. ಇದರಿಂದ ಗಾಯಾಳು ಸ್ವಾನ್ ಅವರು ರೌಡಿಶೀಟರ್ ಬದ್ರುದ್ದೀನ್ ಯಾನೆ ಅದ್ದುವನ್ನು ರಕ್ಷಿಸಲು ಸುಳ್ಳು ಹೇಳಿ ದಾರಿತಪ್ಪಿಸಲು ಪ್ರಯತ್ನಪಟ್ಟಿರುವುದು ಸ್ಪಷ್ಟವಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ಬದ್ರುದ್ದೀನ್ ಅವರ ಮಳಿಗೆಯಲ್ಲಿ ಜ.6ರಂದು ಆಕಸ್ಮಿಕವಾಗಿ ಗುಂಡು ಹಾರಾಟವಾಗಿ ಧರ್ಮಗುರು ಸ್ವಾನ್ ಎಂಬವರು ಗಂಭೀರ ಗಾಯಗೊಂಡಿದ್ದರು. ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಭಾಸ್ಕರನ ಕಥೆ : ರೌಡಿಶೀಟರ್ ಬದ್ರುದ್ದೀನ್ ಕೈಯಿಂದಲೇ ಗುಂಡು ಹಾರಾಟ ಆಗಿವುದು ತನಿಖೆಯಿಂದ ತಿಳಿದು ಬಂದಿದೆ. ಆದರೆ ವಿಚಾರಣೆ ವೇಳೆ ಗನ್ ಬಜಪೆಯ ಭಾಸ್ಕರ್ ಅವರದ್ದು ಎಂದು ಹೇಳುವ ಮೂಲಕ ಮತ್ತೊಮ್ಮೆ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಸ್ವಾನ್ ಹೇಳಿಕೆ ಗೊಂದಲದಲ್ಲಿದ್ದ ಕಾರಣ ಬದ್ರುದ್ದೀನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬಹಿರಂಗವಾಗಿದೆ.
ಸತ್ಯಾಂಶ ಬಹಿರಂಗ: ಘಟನೆ ನಡೆದ ಒಂದು ದಿನದ ಹಿಂದೆ ಪರವಾನಗಿ ಇಲ್ಲದ ಅಕ್ರಮ ಗನ್‌ನ್ನು ಇಮ್ರಾನ್ ಎಂಬಾತ ಬದ್ರುದ್ದೀನ್‌ಗೆ ನೀಡಿದ್ದ. ಕೇರಳದ ವ್ಯಕ್ತಿಯೊಬ್ಬನಿಂದ ಇಮ್ರಾನ್ ಗನ್ ಖರೀದಿಸಿದ್ದ ಎಂದು ತಿಳಿದು ಬಂದಿದೆ. ಸ್ವಾನ್ ಯಾಕೆ ಸುಳ್ಳು ಮಾಹಿತಿ ನೀಡಿದ ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು. ಘಟನೆ ವೇಳೆ ಅಲ್ಲಿದ್ದ ಪ್ರತ್ಯಕ್ಷದರ್ಶಿಗಳಿಂದಲೂ ಮಾಹಿತಿ ಪಡೆಯಲಾಗಿದೆ ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ.
ಬಂಧನ: ಆರೋಪಿ ರೌಡಿಶೀಟರ್ ಬದ್ರುದ್ದೀನ್ ಯಾನೆ ಅದ್ದು (35) ಎಂಬಾತನನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.