

ಮಂಗಳೂರು: ಪ್ರತಿಯೊಬ್ಬ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪೋಷಕರ ನಂತರ ಶಿಕ್ಷಕರ ಪಾತ್ರ ಅತ್ಯಂತ ದೊಡ್ಡದು. ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗಾಗಿ ಶಿಕ್ಷಕರ ಪರಿಶ್ರಮ ಶ್ಲಾಘನೀಯ ಎಂದು ಸಂತ ಅಲೋಶಿಯಸ್ ಕಾಲೇಜಿನ ನಿಕಟ ಪೂರ್ವ ಎಲ್‌ಸಿಆರ್‌ಐ ನಿರ್ದೇಶಕ ಡಾ.ರಿಚರ್ಡ್ ಗೊನ್ಸಾಲ್ವಿಸ್ ಅಭಿಪ್ರಾಯಪಟ್ಟರು.
ವಳಚ್ಚಿಲ್ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಎರಡು ವರ್ಷದ ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ಮೈಲಿಗಲ್ಲು. ಅಂಥ ಶಿಕ್ಷಣವನ್ನು ಎಕ್ಸ್‌ಪರ್ಟ್ ಕಾಲೇಜು ಅತ್ಯಂತ ಯಶಸ್ವಿಯಾಗಿ ಕಳೆದ 3 ದಶಕಗಳಿಂದ ನೀಡುತ್ತಾ ಬಂದಿದೆ. ವ್ಯವಸ್ಥಿತ ಯೋಜನೆ, ಶ್ರಮ, ಕ್ರಿಯಾಶೀಲತೆಯಿಂದ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ ಎಂದವರು ವಿವರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಮಾತನಾಡಿ, ಶಿಕ್ಷಕ ತನ್ನ ತರಗತಿಯಲ್ಲಿ ಉತ್ಸಾಹ ಭರಿತ ವಾತಾವರಣ ನಿರ್ಮಿಸಿದರೆ ಯಶಸ್ಸು ಕಾಣುತ್ತಾನೆ. ತಪ್ಪನ್ನು ತಪ್ಪು ಎಂದೂ, ಸರಿಯನ್ನು ಸರಿಯೆಂದೂ ತಿಳಿಸುವುದೇ ಶಿಕ್ಷಣ. ಶಿಕ್ಷಕರು ನಿರಂತರ ಅಧ್ಯಯನ ಶೀಲರಾಗಿದ್ದು, ಕಲಿಕೆಯಲ್ಲಿ ಕಾರ್ಯತತ್ಪರರಾಗಿರಬೇಕು ಎಂದರು.
ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ಡಾ.ಉಷಾಪ್ರಭಾ ಎನ್.ನಾಯಕ್ ತಮ್ಮ ಗುರು ಡಾ.ರಿಚರ್ಡ್ ಗೊನ್ಸಾಲ್ವಿಸ್ ಅವರ ಬಗ್ಗೆ ಮಾತನಾಡಿ, ಅವರ ಸರಳತೆ, ವಿನಯಶೀಲತೆ ಅನುಕರಣೀಯ. ಶಿಕ್ಷಕರಲ್ಲಿ ಯಾವತ್ತೂ ತಾಯಿಯಂತೆ ಸಹೃದಯ ಗುಣವಿರಬೇಕು ಎಂದು ಕಿವಿ ಮಾತು ಹೇಳಿದರು.
ರಸಾಯನಶಾಸ ವಿಭಾಗದ ಉಪನ್ಯಾಸಕ ಡಾ.ವಿಜು ಕಾಮತ್ ಮತ್ತು ಜೀವಶಾಸ ವಿಭಾಗದ ಉಪನ್ಯಾಸಕಿ ರಮ್ಯಾ ಗಟ್ಟಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಡಾ.ಸರ್ವಪಳ್ಳಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಶಿಕ್ಷಕ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಮತ್ತು ಮನರಂಜನಾ ಕಾರ್ಯಕ್ರಮ ನಡೆಯಿತು. ಮಾಹಿತಿ ತಂತ್ರಜ್ಞಾನ ನಿರ್ದೇಶಕ ಅಂಕುಶ್ ಎಲ್. ನಾಯಕ್, ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಕೆ.ವಿಜಯನ್ ಕರಿಪ್ಪಾಲ್, ಉಪಪ್ರಾಂಶುಪಾಲ ರಾಘವೇಂದ್ರ ಶೆಣೈ ಮತ್ತು ಸುಬ್ರಹ್ಮಣ್ಯ ಉಡುಪ ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಸತ್ತಿನ ಕಾರ್ಯದರ್ಶಿ ಸುರವಿ ಸುಧೀರ್ ಸ್ವಾಗತಿಸಿ, ವಿದ್ಯಾರ್ಥಿ ಸಂಸತ್ತಿನ ಉಪಾಧ್ಯಕ್ಷ ಶ್ರೀಕೃಷ್ಣ ವಂದಿಸಿದರು.