ಸಂಭ್ರಮದ ಡೊಂಗರಕೇರಿ ವೈಕುಂಠ ಏಕಾದಶೀ ಪುಷ್ಪಯಾಗ - ಅಷ್ಟಾವಧಾನ ಸೇವೆ ಕಣ್ತುಂಬಿಕೊಂಡ ಭಕ್ತ ಸಮೂಹ

mng-jan10- dongarakeri2
Published on

ಮಂಗಳೂರು: ನಗರದ ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶುಕ್ರವಾರ 7ನೇ ವರ್ಷದ ವೈಕುಂಠ ಏಕಾದಶೀ ಆಚರಣೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಭ್ರಮದಿಂದ ಜರುಗಿತು.

ಈ ಬಾರಿಯ ವಿಶೇಷವಾಗಿ ಸಾವಯವ ಕೃಷಿಯನ್ನು ಉತ್ತೇಜಿಸುವ ಉದ್ದೇಶದಿಂದ ಸಾವಯವ ಪದ್ಧತಿಯಲ್ಲಿ ಬೆಳೆದ ತರಕಾರಿ ಸೊಪ್ಪಿನ ಗಿಡಗಳನ್ನು ಪ್ರಸಾದ ರೂಪದಲ್ಲಿ ದೇವಳಕ್ಕೆ ಆಗಮಿಸಿದ ಎಲ್ಲಾ ಭಕ್ತರಿಗೆ ನೀಡಲಾಯಿತು.

ದೇವಳವನ್ನು ವಿಶೇಷವಾಗಿ ಸಾವಯವ ವಿವಿಧ ಸೊಪ್ಪುಗಳ (ಪ್ರಧಾನವಾಗಿ ಪಾಲಕ್) ಸಸಿಗಳಿಂದ ಅಲಂಕರಿಸಲಾಗಿತ್ತು. ಹರಿವೆ, ಪಾಲಕ್, ಬೆಂಡೆ, ಕೆಂಪು ತುಳಸಿ ಸಹಿತ ವಿವಿಧ ಸಸಿಗಳನ್ನು ನೈಸರ್ಗಿಕವಾಗಿ ಬೆಳೆಸಿ ಅಲಂಕಾರಕ್ಕೆ ಬಳಕೆ ಮಾಡಲಾಗಿತ್ತು. ಸೂರಜ್ ರಾವ್ ಅವರ ನೇತೃತ್ವದಲ್ಲಿ ಈ ಸಸಿಗಳನ್ನು ಸಿದ್ದಪಡಿಸಲಾಗಿದೆ.

ಶ್ರೀ ದೇವರ ಸಾನಿಧ್ಯದಲ್ಲಿ ಚೈತನ್ಯಾಭಿವೃದ್ಧಿ ಹಾಗೂ ಲೋಕ ಕಲ್ಯಾಣ ಪ್ರಾಪ್ತಿಯ ಸಂಕಲ್ಪದೊಂದಿಗೆ ನಾಮತ್ರಯ ಮಹಾಮಂತ್ರ ಜಪಯಜ್ಞ, ಪುಷ್ಪಯಾಗ ಮತ್ತು ಅಷ್ಟಾವಧಾನ ಸೇವೆ ನಡೆಯಿತು. ಬೆಳಗ್ಗೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಸಂಜೆ ಡೊಂಗರಕೇರಿ ಕಟ್ಟೆಯಿಂದ ಪುಷ್ಪಯಾಗದ ಹೂವಿನ ವಿಶೇಷ ಮೆರವಣಿಗೆ ನಡೆಯಿತು.

ವಿಶೇಷ ಅಲಂಕಾರ: ದೇವಾಲಯದ ಹೊರಾಂಗಣ ಹಾಗೂ ಒಳಗಾಂಗಣವನ್ನು ವಿವಿಧ ಬಗೆಯ ಹೂವುಗಳಿಂದ ಸುಂದರವಾಗಿ ಅಲಂಕಾರ ಮಾಡಲಾಗಿತ್ತು. ಹೊರಾಂಗಣದಲ್ಲೂ ವಿದ್ಯುತ್ ದೀಪಾಲಂಕಾರದ ಜತೆಗೆ ಕೊಡೆ ಜೋಡಿಸಿರುವುದು ಕಣ್ಮನ ಸೆಳೆಯಿತು.

ಮ್ಯಾನೇಜಿಂಗ್ ಟ್ರಸ್ಟಿ ಪ್ರವೀಣ್ ನಾಗ್ವೇಕರ್, ಕಾರ್ಯಕ್ರಮದ ಉಸ್ತುವಾರಿ ಗಣೇಶ್ ಪಿ. ನಾಗ್ವೇಕರ್, ದೇವಳದ ಸಹ ಆಡಳಿತ ಮೊಕ್ತೇಸರರಾದ ಬಿ.ಸಾಯಿದತ್ ನಾಯಕ್, ವಿನಾಯಕ ಶೇಟ್ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net