

ಮಂಗಳೂರು: ಉರ್ವ ಹೊಯಿಗೆಬೈಲಿನ ಜೈಭಾರತಿ ತರುಣ ವೃಂದದ ವತಿಯಿಂದ ಭಾರತೀಯ ಅಂಚೆ ಇಲಾಖೆಯ ಮಂಗಳೂರು ವಿಭಾಗದ ಸಹಯೋಗದಲ್ಲಿ ಅಂಚೆ ಜನಸಂಪರ್ಕ ಅಭಿಯಾನ ಇತ್ತೀಚೆಗೆ ಜರಗಿತು.
ಕೋಡಿಕಲ್‌ನ ನಿಕಟಪೂರ್ವ ಕಾರ್ಪೊರೇಟರ್ ಕಿರಣ್ ಕುಮಾರ್ ಕೋಡಿಕಲ್ ಅಭಿಯಾನ ಉದ್ಘಾಟಿಸಿದರು. ಮಂಗಳೂರಿನ ಮುಂಚೂಣಿಯ ಯುವ ಸಂಘಟನೆಯಾಗಿರುವ ಜೈಭಾರತಿ ತರುಣ ವೃಂದದ ಕಾರ್ಯ ಆದರ್ಶನೀಯ ಎಂದರು.
ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಎಂ.ಸುಧಾಕರ ಮಲ್ಯ ಮುಖ್ಯ ಅತಿಥಿಯಾಗಿದ್ದರು. ಅಂಚೆ ಇಲಾಖೆಯು ಪ್ರಸ್ತುತ ಆಧುನಿಕ ತಂತ್ರಜ್ಞಾನ ಅಳವಡಿಸಿ ಕಾರ್ಯ ನಿರ್ವಹಿಸುತ್ತಿದೆ. ಇಲಾಖೆಯು ಯಾವುದೇ ಲಾಭದ ಉದ್ದೇಶವಿಲ್ಲದೆ ಜನರ ಬಳಿಗೆ ಬಂದು ವಿವಿಧ ಸೇವೆಗಳನ್ನು ಒದಗಿಸುತ್ತಿದೆ ಎಂದರು.
ನಿರ್ಮಿತಿ ಕೇಂದ್ರದ ರಾಜೇಂದ್ರ ಕಲ್ಬಾವಿ ಅವರು ಮಾತನಾಡಿ, ಅಂಚೆ ಇಲಾಖೆಯು ಅತ್ಯಂತ ಕ್ರಿಯಾಶೀಲ ಇಲಾಖೆಯಾಗಿದ್ದು, ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿರುವುದು ಶ್ಲಾಘನೀಯ ಎಂದರು. ಪಾಲಿಕೆಯ ಮಾಜಿ ವಿಪಕ್ಷ ನಾಯಕ ಅನಿಲ್ ಪೂಜಾರಿ ಹಾಗೂ ಮಾಜಿ ಕಾರ್ಪೊರೇಟರ್ ಗಣೇಶ್ ಕುಲಾಲ್ ಶುಭ ಹಾರೈಸಿದರು. ಜೈಭಾರತಿ ತರುಣ ವೃಂದದ ಗೌರವಾಧ್ಯಕ್ಷ ಕೇಶವ ಕರ್ಕೇರ, ಅಧ್ಯಕ್ಷ ವಿಕ್ರಮ್, ಕಾರ್ಯದರ್ಶಿ ಜಿತೇಂದ್ರ ದೇವಾಡಿಗ, ಕೋಶಾಧಿಕಾರಿ ಸುನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಜೈಭಾರತಿ ತರುಣ ವೃಂದದ ಉಪಾಧ್ಯಕ್ಷ ಸತೀಶ್ ಪೂಜಾರಿ ಅಶೋಕನಗರ ಸ್ವಾಗತಿಸಿದರು. ಮಾಜಿ ಕಾರ್ಯದರ್ಶಿ ಸತೀಶ್ ಶೆಟ್ಟಿ ಕೊಡಿಯಾಲ್‌ಬೈಲ್ ನಿರೂಪಿಸಿದರು.