

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನಧಿಕೃತವಾಗಿ ಕ್ಯಾಟರಿಂಗ್ ಉದ್ಯಮ ನಡೆಸುತ್ತಿರುವ ಎಲ್ಲ ಸಂಸ್ಥೆಗಳು ಕಡ್ಡಾಯವಾಗಿ ಸಂಬಂಧಿತ ಪ್ರಾಧಿಕಾರದಿಂದ ಪರವಾನಗಿ ಪಡೆಯಬೇಕು. ಆಹಾರ ಇಲಾಖೆಯ ಅನುಮತಿ ಕಡ್ಡಾಯಗೊಳಿಸಬೇಕು. ಸಭಾಂಗಣಗಳಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ಆಹಾರ ಪೂರೈಕೆಗೆ ಪರವಾನಗಿ ಪಡೆದ ಕ್ಯಾಟರಿಂಗ್ ಸಂಸ್ಥೆಗಳಿಗೆ ಮಾತ್ರವೇ ಅವಕಾಶ ನೀಡಬೇಕು ಎಂದು ದಕ್ಷಿಣ ಕನ್ನಡ ಕ್ಯಾಟರಿಂಗ್ ಮಾಲೀಕರ ಸಂಘ ಒತ್ತಾಯಿಸಿದೆ.
ಆಹಾರದ ಗುಣಮಟ್ಟ, ಸ್ವಚ್ಛತೆ ಕಾಪಾಡುವುದು ಹಾಗೂ ಕ್ಯಾಟರಿಂಗ್ ವ್ಯವಸ್ಥೆಯ ನಿಯಮ ಪಾಲನೆ ಮಾಡಲು ಪರವಾನಗಿ ಪಡೆಯುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಅನಧಿಕೃತವಾಗಿ ಕ್ಯಾಟರಿಂಗ್ ನಡೆಸುತ್ತಿರುವ ಸಂಸ್ಥೆಗಳನ್ನು ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ಗುರುತಿಸಬೇಕು. ಅವರು ಟ್ರೇಡ್ ಲೈಸೆನ್ಸ್ ಹಾಗೂ ಇತರ ಅಗತ್ಯ ಪರವಾನಗಿ ಪಡೆಯುವಂತೆ ಸೂಚಿಸಬೇಕು. ಪರವಾನಗಿ ಪಡೆಯದ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕ್ಯಾಟರಿಂಗ್ ಮಾಲೀಕರ ಸಂಘದ ಅಧ್ಯಕ್ಷ ಅಬ್ದುಲ್ ರಶೀದ್ ಆಗ್ರಹಿಸಿದರು.
ಉಪಾಧ್ಯಕ್ಷ ವಿಜಯ್ ಕುಮಾರ್ ಮಾತನಾಡಿ, ಕ್ಯಾಟರಿಂಗ್ ಸಂಸ್ಥೆಗಳು ಪರವಾನಗಿ ಪಡೆಯುವ ಜತೆಗೆ ಆಹಾರ ಇಲಾಖೆಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಸ್‌ಎಸ್‌ಎಸ್‌ಎಐ)ದಿಂದ ಲೈಸೆನ್ಸ್ ಪಡೆಯಬೇಕಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು, ದ.ಕ. ಜಿಪಂ ಸಿಇಒ, ಜಿಲ್ಲಾ ಆರೋಗ್ಯಾಧಿಕಾರಿ, ಆರೋಗ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವರು, ವಿಧಾನಸಭೆ ಸ್ಪೀಕರ್, ಹಾಗೂ ಜಿಲ್ಲೆಯ ಎಲ್ಲ ಶಾಸಕರಿಗೆ ಸಂಘದ ವತಿಯಿಂದ ಮನವಿ ಸಲ್ಲಿಸಲಾಗಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ಕ್ಯಾಟರಿಂಗ್ ಉದ್ದಿಮೆಗಳಿವೆ. ಈ ಪೈಕಿ 260 ಮಂದಿ ಮಾತ್ರ ದಕ್ಷಿಣ ಕನ್ನಡ ಕ್ಯಾಟರಿಂಗ್ ಮಾಲೀಕರ ಸಂಘದ ಸದಸ್ಯರಾಗಿದ್ದಾರೆ. ಪರವಾನಗಿ ಪಡೆದ ಸಂಸ್ಥೆಗಳಿಗೆ ಮಾತ್ರ ಸಂಘದ ಸದಸ್ಯತ್ವ ನೀಡಲಾಗುತ್ತಿದೆ. ಉಳಿದ 750 ಸಂಸ್ಥೆಗಳು ಅನಧಿಕೃತವಾಗಿ ಆಹಾರ ಪೂರೈಕೆ ಮಾಡುತ್ತಿವೆ. ಪರವಾನಗಿ ಪಡೆದ ಸದಸ್ಯರು ಟ್ರೇಡ್ ಲೈಸೆನ್ಸ್‌ಗಾಗಿ ಮಂಗಳೂರು ಮಹಾನಗರ ಪಾಲಿಕೆಗೆ 35,000ದಿಂದ ಒಂದು ಲಕ್ಷ ರೂ.ವರೆಗೆ ತೆರಿಗೆ ಪಾವತಿಸುತ್ತಿದ್ದಾರೆ. ಈ ತೆರಿಗೆ ಹಣದಿಂದ ಪಾಲಿಕೆ ಸಮಾರಂಭ ನಡೆಯುವ ಸಭಾಂಗಣದ ಬಳಿ ಸ್ವಚ್ಛತೆ ಹಾಗೂ ಕಸ ವಿಲೇವಾರಿ ಮಾಡುತ್ತಿದೆ. ಆದರೆ ಪರವಾನಗಿ ಪಡೆಯದ ಕ್ಯಾಟರಿಂಗ್ ಸಂಸ್ಥೆಗಳು ಈ ಸೇವೆಯನ್ನು ಉಚಿತವಾಗಿ ಪಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಕಾನೂನುಬಾಹಿರ ಕ್ಯಾಟರಿಂಗ್ ನಿಲ್ಲಬೇಕು. ಎಲ್ಲರೂ ಕ್ರಮಬದ್ಧವಾಗಿ ಪರವಾನಗಿ ಪಡೆಯಬೇಕು. ಇಲ್ಲವಾದಲ್ಲಿ ನ್ಯಾಯಯುತ ಹೋರಾಟ ನಡೆಸಲಾಗುವುದು ಎಂದರು.
ದಕ್ಷಿಣ ಕನ್ನಡ ಕ್ಯಾಟರಿಂಗ್ ಮಾಲೀಕರ ಸಂಘದ ಗೌರವಾಧ್ಯಕ್ಷ ಸುಧಾಕರ ಕಾಮತ್, ಉಪಾಧ್ಯಕ್ಷ ವಿಜಯ ಕುಮಾರ್, ಮಾಜಿ ಅಧ್ಯಕ್ಷರಾದ ರಾಜಗೋಪಾಲ ರೈ, ದೀಪಕ್ ಕೋಟ್ಯಾನ್, ಮಹಮ್ಮದ್ ಅನೀಶ್, ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ಕೊಂಚಾಡಿ, ಬಂಟ್ವಾಳ ವಲಯದ ಅಧ್ಯಕ್ಷ ನಾರಾಯಣ ಸುವರ್ಣ ಉಪಸ್ಥಿತರಿದ್ದರು.