ಮಂಗಳೂರು ವಿವಿ ಪ್ರೊ.ಪಿ.ಎಲ್.ಧರ್ಮ ನೂತನ ಕುಲಪತಿ

mng--5 march pro.p l. dharama
Published on

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಪಿ.ಎಲ್.ಧರ್ಮ ಅವರನ್ನು ನೇಮಕ ಮಾಡಿ ರಾಜ್ಯಪಾಲರ ಸಚಿವಾಲಯ ಮಂಗಳವಾರ ಆದೇಶ ಹೊರಡಿಸಿದೆ. ಸಂಜೆ ವೇಳೆಗೆ ಅವರು ವಿಶ್ವವಿದ್ಯಾಲಯದ 10ನೇ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದರು.


2023 ಜೂನ್ 2ರಂದು ಕುಲಪತಿಯಾಗಿದ್ದ ಡಾ.ಪಿ.ಸುಬ್ರಹ್ಮಣ್ಯ ಎಡಪಡಿತ್ತಾಯ ಅವರ ಅಧಿಕಾರವಧಿ ಕೊನೆಗೊಂಡಿತ್ತು. ಆ ಬಳಿಕ ಕಲಾ ನಿಕಾಯದ ಹಿರಿಯ ಡೀನ್ ಪ್ರೊ.ಜಯರಾಜ ಅಮೀನ್ ಅವರು ಪ್ರಭಾರ ಹುದ್ದೆಯನ್ನು ನಿರ್ವಹಿಸಿದ್ದರು. ಪ್ರೊ.ಪಿ.ಎಲ್.ಧರ್ಮ ಅವರು ಮುಂದಿನ 4 ವರ್ಷಗಳ ಕಾಲ ಅಧಿಕಾರವಧಿ ಹೊಂದಿದ್ದಾರೆ.


ರಾಜ್ಯ ಸರ್ಕಾರದಿಂದ ಹಲವು ದಿನಗಳ ಹಿಂದೆಯೇ ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋತ್ ಅವರು ಪರಿಶೀಲನೆ ನಡೆಸಿ, ಅಂತಿಮ ಮುದ್ರೆ ಒತ್ತಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆದೇಶವಾದ ಕೂಡಲೇ ಅಧಿಕಾರ ಸ್ವೀಕರಿಸಿದ್ದಾರೆ.


ಎರಡನೇ ಬಾರಿಗೆ ಕರಾವಳಿಗೆ ಅವಕಾಶ
ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗುವ ಮೊದಲ ಅವಕಾಶ ಪ್ರೊ.ಸುಬ್ರಹ್ಮಣ್ಯ ಎಡಪಡಿತ್ತಾಯರಿಗೆ ಲಭಿಸಿತ್ತು. ಈಗ ಎರಡನೇ ಬಾರಿಗೆ ಕರಾವಳಿಯವರೇ ಆಗಿರುವ ಪ್ರೊ.ಪಿ.ಎಲ್.ಧರ್ಮ ಅವರಿಗೆ ಲಭಿಸಿದೆ. 8 ಅವಧಿಗಳಲ್ಲಿ ಕರಾವಳಿ ಬಿಟ್ಟು ಹೊರ ಜಿಲ್ಲೆಯವರು ಕುಲಪತಿಗಳಾಗಿ ಆಡಳಿತ ನಡೆಸಿದ್ದರು.
ಪಿ.ಎಲ್.ಧರ್ಮ ಅವರು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿ, ಕುಲಸಚಿವರಾಗಿ, ಪರೀಕ್ಷಾಂಗ ಕುಲಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಉತ್ತಮ ಸಾರ್ವಜನಿಕ ಸಂಪರ್ಕವನ್ನೂ ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net