ಕ್ರಿಕೆಟ್ ಕೇವಲ ಆಟವಲ್ಲ, ಭಾವನೆಯೂ ಹೌದು ಯೂನಿವರ್ಸಿಟಿ ಪ್ರೀಮಿಯರ್ ಲೀಗ್ ಸೀಸನ್ 6 ಉದ್ಘಾಟಿಸಿ ರಾಮದಾಸ್ ಗೌಡ ಎಸ್. ಅಭಿಮತ

mng--22 may premiur leage
Published on

ಮಂಗಳೂರು: ಮನೋರಂಜನೆಗಾಗಿ ಹುಟ್ಟಿದ ಆಟ ಪ್ರಸ್ತುತ ವೃತ್ತಿನಿರತ ಪಂದ್ಯವಾಗಿ ಬೆಳೆದಿದೆ. ಜನರನ್ನು ಮಾನಸಿಕವಾಗಿ ಒಗ್ಗೂಡಿಸುವ ಕಲೆ ಹೊಂದಿದ್ದು, ಮನೋರಂಜನೆಯ ಒಂದು ಭಾಗ. ಮನೆ ಮಂದಿಯನ್ನೆಲ್ಲಾ ದೂರದರ್ಶನದ ಮೂಲಕ ಆಕರ್ಷಿಸುವ ಕ್ರಿಕೆಟ್, ಅಂಕಣದತ್ತ ಕರೆದೊಯ್ಯಲು ಯು. ಪಿ. ಎಲ್.ನಂತಹ ಪಂದ್ಯ ಎಲ್ಲೆಡೆ ನಡೆಯಲಿ ಎಂದು ನಿವೃತ್ತ ಎಸ್. ಪಿ. ಹಾಗೂ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ರಾಮದಾಸ್ ಗೌಡ ಎಸ್. ಅಭಿಪ್ರಾಯ ಪಟ್ಟರು.


ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಕ್ರೀಡಾ ವಿಭಾಗ ಮತ್ತು ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ನಡೆದ ಯೂನಿವರ್ಸಿಟಿ ಪ್ರೀಮಿಯರ್ ಲೀಗ್‌_ಸೀಸನ್ 6ನ್ನು ಉದ್ಘಾಟಿಸಿ ಮಾತನಾಡಿದರು.


ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿ ಮತ್ತು ಉಪನ್ಯಾಸಕರು ಬೆರೆತು ಪಂದ್ಯ ಆಡುತ್ತಿರುವುದು ಇದೇ ಮೊದಲು. ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಿ. ಜೀವನದಲ್ಲಿ ಪ್ರೇರಣೆ ನೀಡುವವರು ಬಂದು ಹೋಗುತ್ತಾರೆ, ಆದರೆ ಸ್ವಯಂ ನಂಬಿಕೆ, ಧೈರ್ಯ ಇದ್ದಾಗ ಸಾಧನೆಯ ಮೆಟ್ಟಿಲು ಸರಳವಾಗುತ್ತದೆ. ಕಲಿಯುವ ಹಂಬಲ ಇದ್ದಾಗ ಯಶಸ್ಸು ಕೈ ಸೇರುತ್ತದೆ ಎಂದು ಹೇಳಿದರು.


ಕಾಲೇಜಿನ ಪ್ರಾಂಶುಪಾಲೆ ಡಾ.ಅನಸೂಯ ರೈ, ಪಂದ್ಯವು ನಿಯಮ, ನಿಬರ್ಂಧ, ನಿಯಂತ್ರಣ ಹೊಂದಿದೆ. ಎಲ್ಲರೂ ಒಮ್ಮತದಿಂದ ಕ್ರೀಡಾ ಹುಮ್ಮಸ್ಸಿನಿಂದ ಆಡಿ ಎಂದು ಹಾರೈಸಿದರು. ಕಾಲೇಜಿನ ದೈಹಿಕ ನಿರ್ದೇಶಕ ಡಾ.ಕೇಶವ ಮೂರ್ತಿ, ಪ್ರತಿ ವರ್ಷ ನಡೆಯುವ ಯು.ಪಿ.ಎಲ್. ವಿದ್ಯಾರ್ಥಿಗಳು ಹೊಸ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು. ಪಂದ್ಯ ಹೊಂದಿರುವ ನಿಯಮ ಅನುಸರಿಸಿ ಮಾದರಿ ಪಂದ್ಯವನ್ನಾಗಿ ಮುನ್ನಡೆಸಬೇಕು ಎಂದು ಹೇಳಿದರು.


ಹಳೇ ವಿದ್ಯಾರ್ಥಿ ಸಂಘದ ಸದಸ್ಯ ಶ್ರೀನಿವಾಸ್ ನಾಯಕ್, ವಿದ್ಯಾರ್ಥಿ ಸಂಘ ಅಧ್ಯಕ್ಷ ಜೀವಿತ್ ಗಟ್ಟಿ, ಕ್ರೀಡಾ ಕಾರ್ಯದರ್ಶಿ ಓಬಳಪ್ಪ, ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net