ಅಥ್ಲೆಟಿಕ್ಸ್​ ಕ್ರೀಡೆಗಳ ತಾಯಿ: ಡಾ.ಜೆರಾಲ್ಡ್​ ಡಿಸೋಜ

udp-5-sports
Published on

ಉಡುಪಿ: ಅಥ್ಲೆಟಿಕ್ಸ್​ ಎಲ್ಲಾ ಕ್ರೀಡೆಗಳ ತಾಯಿ. ಇದರಲ್ಲಿ ದೇಹದ ಎಲ್ಲ ಅವಯವಗಳಿಗೆ ವ್ಯಾಯಾಮ ದೊರೆಯುವ ಜಿಗಿತ, ಎಸೆತ, ಓಟದಂತಹ ಸ್ಪರ್ಧೆಗಳಿರುತ್ತವೆ. ವಿದ್ಯಾರ್ಥಿ ಜೀವನದಲ್ಲಿ ಕ್ರೀಡಾಕೂಟ ಎಂಬುದು ಅತೀ ಮುಖ್ಯ. ಆದುದರಿಂದ ಇದರಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಳ್ಳಬೇಕು ಎಂದು ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಜೆರಾಲ್ಡ್​ ಸಂತೋಷ್​ ಡಿಸೋಜ ಹೇಳಿದರು.

ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ, ಉಡುಪಿ ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಲಯನ್ಸ್​ ಕ್ಲಬ್​ ಅಮೃತ್​ ಸಂಯುಕ್ತ ಆಶ್ರಯದಲ್ಲಿ ನಡೆದ ಮಂಗಳೂರು ವಿವಿ ಅಂತರ್​ ಕಾಲೇಜು ಪುರುಷರ ಮತ್ತು ಮಹಿಳೆಯರ ಅಥ್ಲೆಟಿಕ್​ ಚಾಂಪಿಯನ್​ ಶಿಪ್​ನಲ್ಲಿ ಮಾತನಾಡಿದರು.

ಅಂತಾರಾಷ್ಟ್ರೀಯ ಅಥ್ಲೆಟ್​ ರೋಹಿತ್​ ಕುಮಾರ್​ ಕಟೀಲು ಕ್ರೀಡಾಕೂಟ ಉದ್ಘಾಟಿಸಿ, ಕ್ರೀಡಾಪಟುಗಳು ಸಾಧನೆಯನ್ನು ಕೇವಲ ವಿವಿ ಮಟ್ಟಕ್ಕೆ ಸೀಮಿತಗೊಳಿಸಿದೆ ರಾಜ್ಯ, ರಾಷ್ಟ್ರಮಟ್ಟದಲ್ಲೂ ಮಿಂಚಬೇಕು. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟಗಳಲ್ಲೂ ದೇಶದ ಕೀರ್ತಿ ಪಾತಕೆಯನ್ನು ಹಾರಿಸಬೇಕು ಎಂದರು.

ಮುಖ್ಯ ಅತಿಥಿಯಾಗಿ ಮುಂಬೈಯ ಕಸ್ಟಮ್​ನ ನಿವೃತ್ತ ಸಹಾಯಕ ಆಯುಕ್ತ ರೋಹಿತ್​ ಹೆಗ್ಡೆ ಎರ್ಮಾಳ್​, ಮಂಗಳೂರು ವಿವಿಯ ವೀಕ್ಷಕ ಡಾ.ರಮೇಶ್​, ಮಂಗಳೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕರ ಸಂದ ಅಧ್ಯಕ್ಷ ಶೇಷಪ್ಪ ಗೌಡ ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಸುರೇಶ್​ ರೈ ಕೆ. ವಹಿಸಿದ್ದರು. ಕಾಲೇಜಿನ ಕ್ರೀಡಾ ಕಾರ್ಯದರ್ಶಿ ಆದಿತ್ಯ ಕ್ರೀಡಾ ಪ್ರತಿಜ್ಞಾ ಬೋಧಿಸಿದರು.
ಉಡುಪಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್​ ಕುಮಾರ್​ ಶೆಟ್ಟಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಪ್ರವಿಣ್​ ಕುಮಾರ್​ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಉದಯ ಶೆಟ್ಟಿ ವಂದಿಸಿದರು. ಕ್ರೀಡಾಕೂಟದಲ್ಲಿ ಮಂಗಳೂರು ವಿವಿ ವ್ಯಾಪ್ತಿಯ 62 ಕಾಲೇಜುಗಳ 1100 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net