ಚುನಾವಣೆ ಸಮೀಪಿಸಿತೆಂದು ಅನಗತ್ಯ ವಿವಾದ ಸೃಷ್ಟಿಸಬಾರದು: ಮಂಗಳೂರು ವಿವಿ ಗಣೇಶೋತ್ಸವ ಪ್ರಕರಣಕ್ಕೆ ಸಚಿವ ಗಂಡೂರಾವ್ ಅಸಮಾಧಾನ

dinesh gundu rao
Published on

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕಳೆದ 40 ವರ್ಷಗಳಿಂದ ಗಣೇಶೋತ್ಸವ ನಡೆಯುತ್ತಿದೆ. ಮುಂದೆಯೂ ನಡೆಯುತ್ತದೆ. ಚುನಾವಣೆ ಸಮೀಪವಿದೆ ಎಂದು ಈ ವಿಚಾರದಲ್ಲಿ ಗಮನ ಸೆಳೆಯಲು ಯಾರೂ ಅನಗತ್ಯ ವಿವಾದ ಸೃಷ್ಟಿಸಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • ನಗರದಲ್ಲಿ ಸೋಮವಾರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ವಿಶ್ವವಿದ್ಯಾಲಯ ಸ್ವಾಯತ್ತ ಸಂಸ್ಥೆಯಾಗಿದ್ದು, ಅಲ್ಲಿನ ಆಗುಹೋಗುಗಳ ಬಗ್ಗೆ ರಾಜ್ಯಪಾಲರು, ಕುಲಪತಿಯವರು ತೀರ್ಮಾನಿಸುತ್ತಾರೆ. ಈ ವಿಚಾರದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ಟರು ಏನು ಹೇಳುತ್ತಾರೆ ಎನ್ನುವುದು ಮುಖ್ಯವಲ್ಲ ಎಂದು ತಿಳಿಸಿದರು.
  • ಮಂಗಳೂರು ವಿಶ್ವವಿದ್ಯಾಲಯವು ನ್ಯಾಕ್ ಮೌಲ್ಯ ಮಾಪನದಲ್ಲಿ ‘ಎ’ ದರ್ಜೆಯಿಂದ ‘ಬಿ’ ದರ್ಜೆಗೆ ಇಳಿದಿದೆ. ಸಿಬ್ಬಂದಿಗೆ ಪಿಂಚಣಿ ನೀಡಲು ಕೂಡ ಕಷ್ಟದ ಪರಿಸ್ಥಿತಿಯಲ್ಲಿ ವಿಶ್ವವಿದ್ಯಾಲಯ ಇದೆ. ಚರ್ಚೆ ನಡೆಯಬೇಕಾಗಿರುವುದು ಈ ವಿಷಯದಲ್ಲಿ ಎಂದು ಅವರು ಅಭಿಪ್ರಾಯಪಟ್ಟರು.
  • ಮಂಗಳೂರು ವಿವಿಯಲ್ಲಿ ಗಣೇಶೋತ್ಸವದ ನೆಪವಿಟ್ಟುಕೊಂಡು ಆಗುತ್ತಿರುವ ಅನಪೇಕ್ಷಿತ ಬೆಳವಣಿಗೆಗಳನ್ನು ಜನರು ಗಮನಿಸುತ್ತಾರೆ ಎಂದು ನಂಬುವುದಾಗಿ ಅವರು ತಿಳಿಸಿದರು.
  • ಹ್ಯೂಬ್ಲೊ ವಾಚು ಕಟ್ಟಿಕೊಂಡು ಪಂಚೆ ಒಳಗೆ ಖಾಕಿ ಚೆಡ್ಡಿ ಧರಿಸಿಕೊಂಡು ಓಡಾಡಿದರೆ ಸಮಾಜವಾದಿಯಾಗುವುದಿಲ್ಲ ಎಂದು ಬೆಂಗಳೂರಿನ ಸಮಾವೇಶವೊಂದರಲ್ಲಿ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಸಿದ್ದರಾಮಯ್ಯ ಅವರ ಹೆಸರು ಉಲ್ಲೇಖಿಸದೆ ವ್ಯಂಗ್ಯವಾಡಿದ ಘಟನೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಚಿವ ಗುಂಡೂರಾವ್ ಅವರು, ಇಂತಹ ಹೇಳಿಕೆಗಳಿಂದ ಹೇಳಿಕೆ ನೀಡಿದವರಿಗೆ ನಷ್ಟ. ಬೇರೆ ಯಾರಿಗೂ ತೊಂದರೆಯಾಗುವುದಿಲ್ಲ. ಅವರು ಯಾಕೆ ಆ ರೀತಿ ಮಾತನಾಡಿದ್ದಾರೆ ಎಂದು ಗೊತ್ತಿಲ್ಲ. ಆದರೆ ಪಕ್ಷಕ್ಕೆ ಮುಜುಗರ ತರುವ ರೀತಿ ಸಾರ್ವಜನಿಕ ವೇದಿಕೆಯಲ್ಲಿ ಅವರು ಮಾತನಾಡಬಾರದಿತ್ತು ಎಂದು ಅವರು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net