

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕನ್ನಡ ಪರೀಕ್ಷೆ ಸೆ.25ರಂದು ಎಲ್ಲ ಕಡೆಯೂ ನಡೆದಿದೆ, ಆದರೆ ವಿವಿ ಕ್ಯಾಂಪಸ್‌ನಲ್ಲೇ ನಡೆದಿಲ್ಲ!
ಕ್ಯಾಂಪಸ್‌ನ ಕನ್ನಡ ವಿಭಾಗದ ಪ್ರೊಫೆಸರ್ ಮಾಡಿಕೊಂಡ ಗೊಂದಲದಿಂದಾಗಿ ಪ್ರೊ.ಎಸ್.ವಿ.ಪಿ ಅಧ್ಯಯನ ಕೇಂದ್ರದಲ್ಲಿ ಕನ್ನಡ ಪರೀಕ್ಷೆ ನಡೆಯಲೇ ಇಲ್ಲ. ಅಲ್ಲಿ ವಿದ್ಯಾರ್ಥಿಗಳಿಗೆ ವಿಭಾಗದ ಪ್ರೊಫೆಸರ್ ಸೆ.26ರಂದು ಪರೀಕ್ಷೆ ಎಂದು ಹೇಳುವ ಮೂಲಕ ಗೊಂದಲ ಸೃಷ್ಟಿಸಿದ್ದಾರೆ.
ಚಿಕ್ಕ ಆಳುವಾರ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ, ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಹಾಗೂ ಮಂಗಳೂರು ವಿವಿ ಕ್ಯಾಂಪಸ್‌ನಲ್ಲಿ ಪರೀಕ್ಷೆ ನಡೆಸಲು ಸೂಚಿಸಲಾಗಿತ್ತು. 21ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಮಳೆ ಕಾರಣಕ್ಕೆ 25ರಂದು ನಡೆಸಲು ತೀರ್ಮಾನಿಸಲಾಗಿತ್ತು.
ಆದರೆ ಪ್ರೊ.ಎಸ್.ವಿ.ಪಿ ಅಧ್ಯಯನ ಕೇಂದ್ರದವರು ಮಾತ್ರ ನಮಗೆ ವಿಶ್ವವಿದ್ಯಾಲಯ ಮಾಹಿತಿ ಕೊಟ್ಟಿಲ್ಲ ಎಂದು ಪರೀಕ್ಷೆಯನ್ನೇ ನಡೆಸಿಲ್ಲ. ಪ್ರಶ್ನೆಪತ್ರಿಕೆ ಬಂದಿಲ್ಲ ಎಂದು ದೂರುತ್ತಿದ್ದಾರೆ. ಆದರೆ ವಿವಿ ಆಡಳಿತದ ಬಳಿ ವೇಳಾಪಟ್ಟಿ ಕಳಿಸಿರುವುದು, ಪ್ರಶ್ನೆಪತ್ರಿಕೆ ಕೊಟ್ಟಿರುವುದಕ್ಕೆ ದಾಖಲೆ ಇದೆ ಎಂದು ಪರೀಕ್ಷಾಂಗ ರಿಜಿಸ್ಟ್ರಾರ್ ಪ್ರೊ.ಪಿ.ಎಲ್.ಧರ್ಮ ‘ವಿಜಯವಾಣಿ’ಗೆ ತಿಳಿಸಿದರು.
ಇ-ಮೇಲ್‌ನಲ್ಲಿ 208 ಕಾಲೇಜಿಗೂ ಕಳುಹಿಸಿದ್ದೇವೆ, ಪ್ರಶ್ನೆಪತ್ರಿಕೆ ಮುದ್ರಿಸಿ ಕೊಟ್ಟಿದ್ದೇವೆ. ಕ್ಯಾಂಪಸ್‌ನಲ್ಲಿ ಯಾಕೆ ಪರೀಕ್ಷೆ ನಡೆಸಿಲ್ಲ ಎನ್ನುವುದಕ್ಕೆ ಕಾರಣ ಕೇಳಿ ಕುಲಪತಿಯವರ ನಿರ್ದೇಶನದಂತೆ ನೋಟೀಸ್ ಕೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಈ ವಿಚಾರ ಗೊತ್ತಾಗಿದ್ದು, ವಿವಿಧ ಮೂಲಗಳ ಮೂಲಕ ಪರೀಕ್ಷೆ ಸೆ.25ರಂದೇ ನಡೆಯಬೇಕಿರುವುದನ್ನು ದೃಢಪಡಿಸಿಕೊಂಡು ಪರೀಕ್ಷಾಂಗ ಕುಲಸಚಿವರೂ ಸೇರಿದಂತೆ ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
29ರಂದು ಮರುಪರೀಕ್ಷೆ
ಕನ್ನಡ ವಿಭಾಗದ ಅಧ್ಯಕ್ಷರೇ ಐದೂ ಕೇಂದ್ರಗಳ ಬೋರ್ಡ್ ಆಫ್ ಸ್ಟಡೀಸ್ ಮುಖ್ಯಸ್ಥರೂ ಆಗಿದ್ದು ಸೆ.29ರಂದು ಪ್ರೊ.ಎಸ್.ವಿ.ಪಿ.ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಗಷ್ಟೇ ಕನ್ನಡ ಮರುಪರೀಕ್ಷೆ ನಡೆಸಬಹುದು ಎಂದು ತಿಳಿಸಿದ್ದಾರೆ. ಅದರನ್ವಯ ಬೇರೆಯೇ ಪ್ರಶ್ನೆಗಳನ್ನು ಆಧರಿಸಿ ಪರೀಕ್ಷೆ ನಡೆಸಬೇಕಾಗಿದೆ.
ಕ್ರಮಕ್ಕೆ ಎಬಿವಿಪಿ ಆಗ್ರಹ
ವಿವಿ ಕ್ಯಾಂಪಸ್‌ನಲ್ಲಿ ಪರೀಕ್ಷೆ ನಡೆಸದ ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ. ವಿಶ್ವವಿದ್ಯಾಲಯದ ಕೇಂದ್ರದಲ್ಲೇ ಈ ರೀತಿಯ ಬೆಳವಣಿಗೆಗಳು ನಡೆದರೆ ಸಾಮಾನ್ಯ ಕಾಲೇಜುಗಳ ಕಥೆ ಏನು ಎಂಬ ಅನುಮಾನ ಮೂಡುತ್ತದೆ. ಈ ರೀತಿಯಾಗಿ ಬೇಜವಾಬ್ದಾರಿತನದಿಂದ ನಡೆದುಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಮುಂದೆ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸಬೇಕೆಂದು ಎಬಿವಿಪಿ ಜಿಲ್ಲಾ ಸಂಚಾಲಕ ಸಂದೇಶ್ ರೈ ಒತ್ತಾಯಿಸಿದ್ದಾರೆ.
ಸದ್ಯಕ್ಕೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಮಾಡುವುದು ನಮ್ಮ ಆದ್ಯತೆ, ಉಳಿದಂತೆ ಆಗಿರುವ ಲೋಪದೋಷಗಳ ಬಗ್ಗೆ ಕುಲಪತಿಗಳ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು.
- ಪ್ರೊ.ಪಿ.ಎಲ್.ಧರ್ಮ, ಪರೀಕ್ಷಾಂಗ ಕುಲಸಚಿವರು, ಮಂಗಳೂರು ವಿವಿ