

ವೇಣುವಿನೋದ ಕೆ.ಎಸ್.ಮಂಗಳೂರು
ಒಂದೆಡೆ ಸ್ನಾತಕೋತ್ತರ ಕೋರ್ಸ್‌ಗಳಿಗೆ ಕಡಿಮೆಯಾಗಿರುವ ಬೇಡಿಕೆ, ಇನ್ನೊಂದೆಡೆ ಪದವಿ ಅಂತಿಮ ಸೆಮಿಸ್ಟರ್ ಫಲಿತಾಂಶದಲ್ಲಿ ಆಗಿರುವ ಗೊಂದಲ. ಇದರಿಂದಾಗಿ ಮತ್ತೆ ಪಿಜಿ ಮೊದಲ ಸೆಮಿಸ್ಟರ್ ಕೋರ್ಸ್ ಪ್ರವೇಶ ವಿಳಂಬವಾಗಿದೆ.
ಈ ತಿಂಗಳ ಕೊನೆಯಲ್ಲಿ ಪಿಜಿ ಕೋರ್ಸ್‌ಗಳ ಮೊದಲ ಸೆಮಿಸ್ಟರ್ ಶುರುವಾಗುವ ನಿರೀಕ್ಷೆ ಇತ್ತು. ಆದರೆ ಪಿಜಿ ಕೋರ್ಸ್‌ಗೆ ಅರ್ಜಿ ಹಾಕಲು ಕೊನೆಯ ದಿನಾಂಕವನ್ನು ಡಿ.24ರವರೆಗೂ ವಿಸ್ತರಿಸಲಾಗಿದೆ. ಹಲವು ಬಾರಿ ವಿಸ್ತರಣೆ ನಡೆಯುತ್ತಲೇ ಇದ್ದು, ಕಳೆದ ಬಾರಿ ಡಿ.9ರ ವರೆಗೆ ವಿಸ್ತರಿಸಲಾಗಿತ್ತು.
ನವೆಂಬರ್ ಕೊನೆಯ ವಾರದಲ್ಲಿ ಪದವಿ 6ನೇ ಸೆಮಿಸ್ಟರ್ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಡಿಸೆಂಬರ್ ಅಂತಿಮ ವಾರದೊಳಗೆ ಪಿಜಿ ಪ್ರಥಮ ಸೆಮಿಸ್ಟರ್ ಶುರು ಮಾಡುವುದಾಗಿ ಮಂಗಳೂರು ವಿವಿ ಅಧಿಕಾರಿಗಳು ಹೇಳಿದ್ದರು. ಆದರೆ ಪದವಿ ಫಲಿತಾಂಶದಲ್ಲಿ ಅನೇಕ ಗೊಂದಲಗಳು ಉಂಟಾಗಿವೆ. ವಿದ್ಯಾರ್ಥಿಗಳ ಅಂಕದ ಮಾಹಿತಿಯನ್ನು ಮಂಗಳೂರು ವಿವಿ ಅಧೀನದ 33 ಕಾಲೇಜುಗಳು ನೀಡುವಾಗ ಅನೇಕ ತಪ್ಪುಗಳಾಗಿವೆ. ಇದರಿಂದಾಗಿ ವಿದ್ಯಾರ್ಥಿಗಳು ಫಲಿತಾಂಶದಲ್ಲಿ ಆಗಿರುವ ಸಮಸ್ಯೆಗಳ ಬಗ್ಗೆ ಮಂಗಳೂರು ವಿವಿಗೆ ದೂರು ನೀಡುತ್ತಿದ್ದಾರೆ.
ಈ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಡಿ.24ರವರೆಗೆ ಅವಕಾಶ ನೀಡಲಾಗಿದೆ. ಅದರ ಜೊತೆ ಪಿಜಿ ಕೋರ್ಸ್‌ಗೆ ಅರ್ಜಿ ಹಾಕುವುದಕ್ಕೂ ಅಲ್ಲಿವರೆಗೂ ಅವಕಾಶ ವಿಸ್ತರಣೆ ಮಾಡಲಾಗಿದೆ ಎನ್ನುತ್ತಾರೆ ರಿಜಿಸ್ಟ್ರಾರ್ ಡಾ.ಕಿಶೋರ್ ಕುಮಾರ್. ಸ್ನಾತಕೋತ್ತರ ಕೋರ್ಸ್‌ಗಳ 2,3,4ನೇ ಸೆಮಿಸ್ಟರ್ ತರಗತಿಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿವೆ.
ಕುಗ್ಗುತ್ತಿದೆ ಅರ್ಜಿಗಳ ಸಂಖ್ಯೆ! ಈ ಬಾರಿ ಕೋವಿಡ್ ಪರಿಣಾಮವೋ ಏನೋ ಸ್ನಾತಕೋತ್ತರ ಪದವಿಗೆ ಬೇಡಿಕೆಯೂ ಕುಗ್ಗಿದೆ. ಇದುವರೆಗೆ ಬಂದ ಅರ್ಜಿಗಳ ಸಂಖ್ಯೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಡಿಮೆ. ಇದ್ದುದರಲ್ಲೇ ವಾಣಿಜ್ಯಶಾಸ್ತ್ರ, ವಿಜ್ಞಾನದಲ್ಲಿ ಭೌತಶಾಸ್ತ್ರ, ರಾಸಾಯನ ಶಾಸ್ತ್ರ ಹಾಗೂ ಎಂಎಸ್‌ಡಬ್ಲುೃಗೆ ಸ್ಪಂದನೆ ಪರವಾಗಿಲ್ಲ ಎನ್ನುವಷ್ಟಿದೆ. ಕಲಾ ವಿಭಾಗಗಳಲ್ಲಿ ಬಹುತೇಕ ಸೀಟುಗಳು ಖಾಲಿ ಇವೆ. ಅರ್ಥಶಾಸ್ತ್ರ, ರಾಜಕೀಯಶಾಸ್ತ್ರ, ರಾಜಕೀಯ ಶಾಸ್ತ್ರದಂತಹ ಕೋರ್ಸ್‌ಗಳಿಗೆ ತಿರಾ ಕಡಿಮೆ ಸ್ಪಂದನೆ ವ್ಯಕ್ತವಾಗಿದೆ.
ಈ ಬಾರಿ ಮಂಗಳೂರು ವಿವಿಯಿಂದ ಓಪನ್ ಹೌಸ್(ಕೋರ್ಸ್‌ಗಳ ಪ್ರಚಾರ) ಮಾಡುತ್ತಿಲ್ಲ, ಸೋಶಿಯಲ್ ಮೀಡಿಯಾದಲ್ಲಿ ಸ್ನಾತಕೋತ್ತರ ಕೋರ್ಸ್‌ಗಳ ಪ್ರಚಾರ ಶುರು ಮಾಡಿದ್ದೇವೆ. ಡಿಸೆಂಬರ್ ಕೊನೆಯ ವೇಳೆಗೆ ಯುಜಿ ಕೋರ್ಸ್‌ಗಳ ಫಲಿತಾಂಶ ಸರಿಯಾಗಿ ಬರಲಿದ್ದು, ಹೆಚ್ಚು ವಿದ್ಯಾರ್ಥಿಗಳು ಪಿಜಿಗೆ ಸೇರ್ಪಡೆಯಾಗುವ ನಿರೀಕ್ಷೆಯಲ್ಲಿದ್ದೇವೆ.
-ಡಾ.ಕಿಶೋರ್ ಕುಮಾರ್ ರಿಜಿಸ್ಟ್ರಾರ್, ಮಂಗಳೂರು ವಿವಿ