

ಮಂಗಳೂರು: ವಿಶ್ವವಿದ್ಯಾಲಯದ ಪರೀಕ್ಷೆಗಳ ಫಲಿತಾಂಶಕ್ಕೆ ಸಂಬಂಧಿಸಿದ ಎಲ್ಲ ತಾಂತ್ರಿಕ ಪ್ರಕ್ರಿಯೆಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ವಿಶ್ವವಿದ್ಯಾಲಯದ ತಂಡವೇ ನಿರ್ವಹಿಸಲಿದೆ ಎಂದು ಮಂಗಳೂರು ವಿ.ವಿ ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಎಲ್.ಧರ್ಮ ತಿಳಿಸಿದ್ದಾರೆ.
ಬೆಂಗಳೂರಿನ ಅಟ್ರಿಸ್ ಸಾಫ್ಟ್‌ವೇರ್ ಸಂಸ್ಥೆ ಜತೆಗೆ 2015ರಿಂದ ಇದ್ದ ಒಪ್ಪಂದ ಈ ವರ್ಷ ಘಟಿಕೋತ್ಸವದ ದಿನ ಮುಗಿಯಲಿದೆ. ಪರೀಕ್ಷಾ ಫಲಿತಾಂಶ ಕ್ರೋಡೀಕರಿಸಿ ಪ್ರಕಟಿಸುವುದು ಸಹಿತ ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆ ಕಂಪನಿ ನಿರ್ವಹಿಸುತ್ತಿತ್ತು. ಪ್ರತಿವರ್ಷವೂ ಫಲಿತಾಂಶದಲ್ಲಿ ಪ್ರಮುಖ ಲೋಪಗಳಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನೋಟಿಸ್ ಜಾರಿ: ಫಲಿತಾಂಶ ಪ್ರಕಟಣೆ ಸಂದರ್ಭ ಉಂಟಾಗುತ್ತಿದ್ದ ಲೋಪಗಳು ಕಡಿಮೆಯಾಗಿದೆ. ಈ ಬಾರಿ ಇಬ್ಬರು ವಿದ್ಯಾರ್ಥಿಗಳ ಫಲಿತಾಂಶ ಗೊಂದಲವನ್ನು ಗಂಭೀರವಾಗಿ ಪರಿಗಣಿಸಿ ಕಂಪನಿಗೆ ಕುಲಪತಿ ನೋಟಿಸ್ ನೀಡಿ ಸ್ಪಷ್ಟೀಕರಣ ಕೇಳಿದ್ದಾರೆ. ಸಾಫ್ಟ್‌ವೇರ್ ದೋಷದಿಂದಾಗಿ ಫಲಿತಾಂಶದಲ್ಲಿ ಪ್ರಮಾದ ಆಗಿದೆ ಎಂದು ಗುತ್ತಿಗೆ ಕಂಪನಿ ಒಪ್ಪಿಕೊಂಡಿದೆ. ಆ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವುದಾಗಿ ಕುಲಸಚಿವರು ತಿಳಿಸಿದರು.
ವಿ.ವಿ. ದೂರಶಿಕ್ಷಣ ಕೇಂದ್ರದ ನಿರ್ದೇಶಕ ಪ್ರೊ.ಸಂಗಪ್ಪ, ಸಹಾಯಕ ಕುಲಸಚಿವೆ ಯಶೋದಾ, ವಿಶೇಷಾಧಿಕಾರಿ ಡಾ.ರಮೇಶ್, ತಾಂತ್ರಿಕ ಸಮಿತಿ ಸಂಯೋಜಕ ಡಾ.ರವಿ ಸುದ್ದಿಗೋಷ್ಠಿಯಲ್ಲಿದ್ದರು.
ಹೆಲ್ಪ್‌ಡೆಸ್ಕ್ ಆರಂಭ: ಕರೊನಾ ಸವಾಲಿನ ನಡುವೆಯೂ ವಿ.ವಿ ತನ್ನ ವ್ಯಾಪ್ತಿಯಲ್ಲಿ ಬರುವ 210 ಕಾಲೇಜುಗಳ ಪೈಕಿ 205 ಕಾಲೇಜುಗಳ ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಹಲವಾರು ಕೋರ್ಸ್‌ಗಳ ಫಲಿತಾಂಶ ಪ್ರಕಟವಾಗಿದ್ದು, ಬಾಕಿ ಫಲಿತಾಂಶ ಶೀಘ್ರ ನೀಡಲಾಗುವುದು. ಒಟ್ಟು 40,942 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಫಲಿತಾಂಶ ಗೊಂದಲಗಳನ್ನು ಪರಿಹರಿಸಲು ವಿವಿ ಹೆಲ್ಪ್‌ಡೆಸ್ಕ್ ಆರಂಭಿಸಿದೆ. ಅಂಕಗಳ ಕುರಿತು ಅಸಮಾಧಾನ ಇದ್ದರೆ ನಿಗದಿತ ಶುಲ್ಕ ಪಾವತಿಸಿ ಉತ್ತರ ಪರೀಕ್ಷೆ ವೀಕ್ಷಣೆ, ಮರು ಮೌಲ್ಯಮಾಪನ ಹಾಗೂ ಅಂಕಗಳ ಮರು ಎಣಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಡಿ.21ರಂದು ವಿಶೇಷ ಪರೀಕ್ಷೆ: ಸೆಪ್ಟೆಂಬರ್- ಅಕ್ಟೋಬರ್‌ನ ಪರೀಕ್ಷೆಗಳಿಗೆ ಕರೊನಾ ಹಿನ್ನೆಲೆಯಲ್ಲಿ ಆಗಮಿಸಲು ಸಾಧ್ಯವಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಡಿ.21ರಂದು ವಿಶೇಷ ಪರೀಕ್ಷೆ ನಡೆಯಲಿದೆ. ಕೊಡಗು, ಮಂಗಳೂರು ಮತ್ತು ಉಡುಪಿಯಲ್ಲಿ ಪರೀಕ್ಷಾ ಕೇಂದ್ರ ತೆರೆಯಲಾಗುವುದು. ಶ್ರೀಲಂಕಾದ ಆರು ವಿದ್ಯಾರ್ಥಿಗಳ ಸಹಿತ 5 ಸಾವಿರಕ್ಕೂ ಅಧಿಕ ಮಂದಿ ಪರೀಕ್ಷೆ ಬರೆಯಲಿದ್ದಾರೆ ಎಂದು ಪ್ರೊ.ಧರ್ಮ ತಿಳಿಸಿದರು.