ಉಳ್ಳಾಲ ಆಂಧ್ರದ ಮಹಿಳೆ ಸಮುದ್ರಪಾಲು, ಐವರ ರಕ್ಷಣೆ

FIR-2
Published on

ಮಂಗಳೂರು: ಉಳ್ಳಾಲ ಸಮುದ್ರ ತೀರಕ್ಕೆ ವಿಹಾರಕ್ಕೆ ಬಂದಿದ್ದ ಆಂಧ್ರ ಪ್ರದೇಶ ಮೂಲದ ಆರು ಮಹಿಳೆಯರಲ್ಲಿ ಓರ್ವರು ಸಮುದ್ರಪಾಲಾಗಿ ಸಾವನ್ನಪ್ಪಿದ್ದು, ಉಳಿದ ಐವರನ್ನ ಸ್ಥಳೀಯರು ರಕ್ಷಿಸಿದ್ದಾರೆ.


ಆಂಧ್ರಪ್ರದೇಶದ ಕೊಂಡಾಪುರದ ಸಿರಿಲಿಂಗಪಲ್ಲಿ ನಿವಾಸಿ ಪಿ.ಎಲ್ ಪ್ರಸನ್ನ ಎಂಬವರ ಪತ್ನಿ ಪರಿಮಿ ರತ್ನ ಕುಮಾರಿ (57) ಸಾವನ್ನಪ್ಪಿದವರು.


ಉಳ್ಳಾಲ ಕಡಲ ಕಿನಾರೆಯಲ್ಲಿ ಸೋಮವಾರ ಸಂಜೆ ಪರಿಮಿ ರತ್ನ ಕುಮಾರಿ ಅವರು ಸ್ನೇಹಿತೆಯರಾದ ವೆನ್ನ ವಿಜಯ ಲಕ್ಷ್ಮೀ, ಸ್ವಾತಿ, ಸುನಂದ, ಅರುಣ ಮತ್ತು ಸುಮಾ ಅವರೊಂದಿಗೆ ವಿಹರಿಸುತ್ತಿದ್ದ ಸಂದರ್ಭ ಬೃಹತ್ ಗಾತ್ರದ ಅಲೆಯೊಂದು ಅಪ್ಪಳಿಸಿ ಆರು ಮಹಿಳೆಯರನ್ನು ಎಳೆದೊಯ್ದಿತ್ತು. ಸ್ಥಳೀಯರು ತಕ್ಷಣ ಆರು ಮಂದಿಯನ್ನ ಸಮುದ್ರದಿಂದ ಮೇಲಕ್ಕೆತ್ತಿದ್ದಾರೆ. ಪ್ರಜ್ಞಾಹೀನರಾಗಿದ್ದ ಪರಿಮಿ ರತ್ನ ಕುಮಾರಿ ಅವರ
ನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.


ಪ್ರವಾಸಕ್ಕೆಂದು ಬಂದಿದ್ದರು: ಹೈದರಾಬಾದ್‌ನಿಂದ 6 ಮಂದಿ ಮಹಿಳೆಯರು ಜೂ.6 ಕ್ಕೆ ಮೈಸೂರಿಗೆ ವಿಮಾನದ ಮೂಲಕ ಬಂದಿಳಿದಿದ್ದರು. ಅಲ್ಲಿ ಪ್ರವಾಸ ಮುಗಿಸಿದ ಬಳಿಕ ಇನೋವಾ ಕಾರಿನಲ್ಲಿ ಜೂ.7 ಕ್ಕೆ ಕೊಡಗಿಗೆ ತಲುಪಿದ್ದರು. ಜೂ.9 ಕ್ಕೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ದರ್ಶನ ಮುಗಿಸಿ, ಸೋಮವಾರ ಬೆಳಗ್ಗೆ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿ, ಮಧ್ಯಾಹ್ನ ಸೋಮೇಶ್ವರ ಸೋಮನಾಥ ದೇವರ ದರ್ಶನ ಪಡೆದು, ಸಂಜೆಯ ವೇಳೆಗೆ ಕಡಲ ಕಿನಾರೆಗೆ ಭೇಟಿ ನೀಡಿದ್ದರು. ಸಮುದ್ರದ ಅಪಾಯದ ಬಗ್ಗೆ ಅರಿವಿರದ ಅವರು ಸಮುದ್ರಕ್ಕಿಳಿದಿದ್ದರು. ಕಳೆದ ನಾಲ್ಕು ದಿನಗಳಿಂದ ಮುಂಗಾರು ಬಿರುಸುಗೊಂಡ ಕಾರಣ ಕಡಲು ಪ್ರಕ್ಷುಬ್ಧಗೊಂಡಿದೆ. ಬೃಹತ್ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಈ ಅಲೆಗಳು ಅಪಾಯಕಾರಿಯಾಗಿದೆ. ಮಳೆಗಾಲದಲ್ಲಿ ಎಲ್ಲಾ ಬೀಚ್‌ಗಳಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಈಗಾಗಲೇ ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಗೃಹರಕ್ಷಕದಳದ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಆದರೂ ಕೆಲವೊಮ್ಮೆ ಅವರ ಕಣ್ಣು ತಪ್ಪಿಸಿ ಪ್ರವಾಸಿಗರು ಸಮುದ್ರಕ್ಕೆ ಇಳಿಯುತ್ತಾರೆ. ಕೆಲವು ಪ್ರವಾಸಿಗರು ನೀಡಿದ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಸಮುದ್ರಕ್ಕಿಳಿದು ಅಪಾಯ ತಂದುಕೊಳ್ಳುತ್ತಿದ್ದಾರೆ.


ಮೃತ ಮಹಿಳೆಯ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಕುಟುಂಬಸ್ಥರಿಗೆ ಬಿಟ್ಟು ಕೊಡಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net