

ಮಂಗಳೂರು: ಜಿಲ್ಲೆಯಲ್ಲಿ ತೀವ್ರ ಸಂಚಲನ ಉಂಟು ಮಾಡಿದ್ದ ಉಳಾಯಿಬೆಟ್ಟು, ಪೆಮರ್ಂಕಿಯ ಉದ್ಯಮಿ ಪದ್ಮನಾಭ ಕೋಟ್ಯಾನ್ ಅವರ ಮನೆ ದರೋಡೆ ನಡೆಸಿದ ಪ್ರಕರಣವನ್ನು ಮಂಗಳೂರು ನಗರ ಪೊಲೀಸರು ಭೇದಿಸಿ ಪ್ರಕರಣದಲ್ಲಿ ಭಾಗಿಯಾದ 10 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನೀರುಮಾರ್ಗದ ಕಂಪಮನೆಯ ವಸಂತ ಕುಮಾರ್ (42), ನೀರುಮಾರ್ಗ ಗ್ರಾ.ಪಂ. ಹತ್ತಿರದ ನಿವಾಸಿ ರಮೇಶ ಪೂಜಾರಿ (42), ಅಡ್ಯನಡ್ಕ ಪೆರುವಾಯಿ ಗ್ರಾಮದ ಮುಕುಡಾಪ್ ನಿವಾಸಿ ರೈಮಂಡ್ ಡಿಸೋಜ (47), ಕಾಸರಗೋಡು ಉಪ್ಪಳ ಪೈವಳಿಕೆ ಗ್ರಾಮದ ಕುರಿಯ ಹೌಸ್ ಬಾಲಕೃಷ್ಣ ಶೆಟ್ಟಿ (48), ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯವರಾದ ಜಾಕೀರ್ ಯಾನೆ ಶಾಕೀರ್ ಹುಸೈನ್(56), ವಿನೋಜ್ ಪಿ.ಕೆ ವಿನ್ನು ವಿನೋಜ್ ಪಲ್ಲಿಸ್ಸೆರಿ(38), ಸಜೀಶ್ .ಎಂ.ಎಂ. ಮಣಿ(32), ಬಿಜು.ಜಿ. (41), ಸತೀಶ್ ಬಾಬು (44), ಶಿಜೋ ದೇವಸ್ಸಿ (38) ಎಂಬವರನ್ನು ಬಂಧಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾದ ಇನ್ನೂ ಕೆಲವರ ಬಂಧನಕ್ಕೆ ಬಾಕಿ ಇದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿ ವಸಂತ ಕುಮಾರ್ ಪದ್ಮನಾಭ ಕೋಟ್ಯಾನ್ ಅವರ ಚಾಲಕನಾಗಿಯೂ ಕೆಲಸ ಮಾಡಿದ್ದ. ಪ್ರಸ್ತುತ ನೀರುಮಾರ್ಗ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದಾನೆ. ಈತನೇ ಈ ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದಾನೆ.
ಪ್ರಕರಣದ ವಿವರ: ಜೂನ್ 21ರಂದು ಸಂಜೆ ಸುಮಾರು 7-45 ಗಂಟೆಗೆ ಪದ್ಮನಾಭ ಕೋಟ್ಯಾನ್ ಅವರು ತನ್ನ ಮನೆಯಲ್ಲಿದ್ದ ಸಮಯ ಸುಮಾರು 10-12 ಮಂದಿ ಆರೋಪಿಗಳು ಚೂರಿಯಿಂದ ಪದ್ಮನಾಭ ಕೋಟ್ಯಾನ್‌ಗೆ ಹಲ್ಲೆ ನಡೆಸಿ ನಂತರ ಅವರ ಪತ್ನಿ ಹಾಗೂ ಮಗನನ್ನು ಕಟ್ಟಿ ಹಾಕಿ ನಗದು ಹಣ ಹಾಗೂ ಬೆಲೆಬಾಳುವ ಸೊತ್ತುಗಳನ್ನು ದರೋಡೆ ಮಾಡಿದ್ದರು. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮೂರು ಪೊಲೀಸ್ ತಂಡ: ಈ ದರೋಡೆ ಪ್ರಕರಣವನ್ನು ಬೇಧಿಸಲು ನಗರ ಅಪರಾಧ ವಿಭಾಗ(ಸಿಸಿಬಿ), ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ದಕ್ಷಿಣ ಉಪವಿಭಾಗದ ಎಸಿಪಿ ರವರ ವಿಶೇಷ ತಂಡಗಳನ್ನು ರಚಿಸಿ ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಘಟನೆ ನಡೆದ ಮನೆಯಲ್ಲಿ ದೊರೆತ ಸಿಸಿ ಕ್ಯಾಮೆರಾ ಫೂಟೇಜ್ ಗಳ ಆಧಾರದಲ್ಲಿ ಹಾಗೂ ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿನ ವಿವಿಧ ಕಡೆಗಳ ಸಿಸಿ ಫೂಟೇಜ್ ಗಳನ್ನು ಸಂಗ್ರಹಿಸಿ ತನಿಖೆಯನ್ನು ಕೈಗೊಳ್ಳಲಾಗಿತ್ತು. ಈ ಕೃತ್ಯದಲ್ಲಿ ಉದ್ಯಮಿಯನ್ನು ಹತ್ತಿರದಿಂದ ತಿಳಿದಿರುವ ಹಾಗೂ ಅವರ ಜೊತೆಯಲ್ಲಿ ಕೆಲಸ ಮಾಡುವ ಕೆಲಸಗಾರರ ಕೈವಾಡವಿರುವುದು ಹಾಗೂ ಹೊರ ರಾಜ್ಯದ ವ್ಯಕ್ತಿಗಳ ಕೈವಾಡವಿರುವುದು ತಿಳಿದು ಬಂದಿತ್ತು. ಆರಂಭದಲ್ಲಿ ಸ್ಥಳೀಯ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಉಳಿದ ಆರೋಪಿಗಳ ಮಾಹಿತಿ ಲಭ್ಯವಾಗಿದೆ. ಕೇರಳದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರ ತಂಡ ಬಂಧಿಸಿದೆ.
ಕೇರಳದಿಂದ ಕರೆಸಿದ್ದರು:
ಈ ದರೋಡೆ ಪ್ರಕರಣದಲ್ಲಿ ಉದ್ಯಮಿಯೊಂದಿಗೆ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಊರಿನವನೇ ಆದ ಆರೋಪಿ ವಸಂತ ಕುಮಾರ್ ಉದ್ಯಮಿಯ ವ್ಯವಹಾರದ ಹಾಗೂ ಮನೆಯ ಮಾಹಿತಿಯನ್ನು ಆರೋಪಿ ರಮೇಶ್ ಪೂಜಾರಿಗೆ ನೀಡಿದ್ದ. ರಮೇಶ್ ಪೂಜಾರಿ ಮತ್ತು ರೈಮಂಡ್ ಡಿಸೋಜ ಇನ್ನೋರ್ವ ಆರೋಪಿ ಬಾಲಕೃಷ್ಣ ಶೆಟ್ಟಿಗೆ, ಬಾಲಕೃಷ್ಣ ಶೆಟ್ಟಿಯು ತನ್ನ ಸ್ನೇಹಿತ ಕೇರಳದ ವ್ಯಕ್ತಿಯೊಂದಿಗೆ ದರೋಡೆ ನಡೆಸಲು ಸಂಚು ರೂಪಿಸಿ ಉದ್ಯಮಿಯ ಮನೆಯ ಮಾಹಿತಿಯನ್ನು ನೀಡಿ ಆರೋಪಿಗಳನ್ನು ಮಂಗಳೂರಿಗೆ ಕರೆಯಿಸಿಕೊಂಡು ಈ ದರೋಡೆ ಕೃತ್ಯ ನಡೆಸಿದ್ದರು. ಈ ದರೋಡೆ ಕೃತ್ಯದಲ್ಲಿ ಒಟ್ಟು 15 ಕ್ಕೂ ಹೆಚ್ಚು ಆರೋಪಿಗಳು ಭಾಗಿಯಾಗಿರುವುದು ತನಿಖೆಯಿಂದ ಕಂಡು ಬಂದಿದೆ. ಆರೋಪಿಗಳ ಪೈಕಿ ಬಿಜು ಹಾಗೂ ಸತೀಶ್ ಬಾಬು ರಡು ತಂಡಗಳನ್ನು ಮಂಗಳೂರಿಗೆ ಕಳುಹಿಸಿ ದರೋಡೆ ಕೃತ್ಯವನ್ನು ನಡೆಸಿದ್ದರು. ಆರೋಪಿಗಳು ಈ ಹಿಂದೆಯೂ ಏಳೆಂಟು ಬಾರಿ ಬಂದು ದರೋಡೆಗೆ ಸ್ಕೆಚ್ ರೂಪಿಸಿದ್ದರು ಎಂದು ಪೊಲೀಸ್ ಆಯುಕ್ತರು ವಿವರಿಸಿದರು.
300 ಕೋಟಿಗೆ ಆಸೆ ಪಟ್ಟಿದ್ದ ತಂಡ: ದರೋಡೆಕೋರರ ಕೇರಳ ತಂಡಕ್ಕೆ ಆರಂಭದಲ್ಲಿ 100 ಕೋಟಿ ರೂ. ಹಾಗೂ ಕೊನೆ ಕೊನೆಗೆ 300 ಕೋಟಿ ರೂ. ಇದೆಯೆಂದು ಮಾಹಿತಿ ಹೋಗಿತ್ತು. ಕೋಟ್ಯಾನ್ ಮಲಗುತ್ತಿದ್ದ ಬೆಡ್ ಅಡಿಭಾಗದಲ್ಲಿ ಅಪಾರ ಪ್ರಮಾಣದಲ್ಲಿ ನಗದು ಇದೆಯೆಂದು ಶಂಕೆಯಲ್ಲಿ ಆರೋಪಿಗಳ ತಂಡ ದರೋಡೆಗೆ ಆರು ತಿಂಗಳಿನಿಂದ ಸ್ಕೆಚ್ ಹಾಕಿತ್ತು. ಭಾರೀ ಹಣ ಇದೆಯೆಂದು ದರೋಡೆ ಬಗ್ಗೆ ಸಾಕಷ್ಟು ಮುಂಜಾಗ್ರತೆ ವಹಿಸಿ ಸಂಚು ನಡೆಸಿತ್ತು. ಜೂನ್ 18ರಂದು ಆರೋಪಿಗಳು ದರೋಡೆಗೆ ಯತ್ನಿಸಿದ್ದರು. ಕೊನೆ ಕ್ಷಣದಲ್ಲಿ ಕೈಬಿಟ್ಟು ಬಳಿಕ ಎರಡು ದಿನ ಬಿಟ್ಟು 21ರಂದು ಸಂಜೆಯೇ ಮನೆ ಹೊಕ್ಕಿದ್ದರು. ಆರೋಪಿಗಳು ಹಣ ಹಾಗೂ ಚಿನ್ನಾಭರಣ ತುಂಬಿಸಿ ಕೊಂಡೊಯ್ಯಲು 15ರಷ್ಟು ಚೀಲಗಳನ್ನು ಸಿದ್ಧ ಮಾಡಿಕೊಂಡು ಬಂದಿದ್ದರು. ಜಾಕೀರ್ ಹುಸೇನ್ ತನಿಖೆಯ ದಿಕ್ಕು ತಪ್ಪಿಸಲು ಹಿಂದಿ ಭಾಷೆ ಮಾತನಾಡುತ್ತ ಪದ್ಮನಾಭ ಕೋಟ್ಯಾನ್ ಮೇಲೆ ಹಲ್ಲೆ ಮಾಡಿದ್ದ. ಇತರರು ಮನೆಯವರನ್ನು ಬೆದರಿಸಿ ಹಣ ಎಲ್ಲಿದೆ ಎಂದು ಹುಡುಕಾಟ ನಡೆಸಿದ್ದರು. ಆರೋಪಿಗಳಿಂದ 9 ಲಕ್ಷ ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ.
ಹಳೇ ಆರೋಪಿಗಳು: ಆರೋಪಿಗಳ ಪೈಕಿ ವಸಂತ ಕುಮಾರ್ ಎಂಬಾತನ ವಿರುದ್ಧ ಈ ಹಿಂದೆ 2011 ಇಸವಿಯಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣವೊಂದು ದಾಖಲಾಗಿತ್ತು. ಜಾಕೀರ್ ಯಾನೆ ಶಾಕೀರ್ ಹುಸೈನ್ ಎಂಬಾತನ ವಿರುದ್ಧ ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ತ್ರಿಶೂರ್ ಈಸ್ಟ್ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ. ಸತೀಶ್ ಬಾಬು ಎಂಬಾತನ ವಿರುದ್ಧ 2006 ನೇ ಇಸವಿಯಲ್ಲಿ ತ್ರಿಶೂರ್ ಜಿಲ್ಲೆಯ ನಡುಪುಯ ಪೊಲೀಸ್ ಠಾಣೆಯಲ್ಲಿ ಶಾಜಿ ಎಂಬಾತನ ಕೊಲೆ ಪ್ರಕರಣ ದಾಖಲಾಗಿದೆ.
ಬಿಜು ಎಂಬಾತನ ವಿರುದ್ದ ಈ ಹಿಂದೆ ಕೇರಳ ರಾಜ್ಯದ ಮುವಾಟ್ಟಿಪುರ ಎಕ್ಸೈಸ್ ವಿಭಾಗದಲ್ಲಿ, ಶಾಂತಾಪುರಂ ಪೊಲೀಸ್ ಠಾಣೆಯಲ್ಲಿ, ಕಾಮಾಕ್ಷಿ ಎಕ್ಸೈಸ್ ವಿಭಾಗದಲ್ಲಿ ಒಟ್ಟು 4 ಅಬಕಾರಿ ಕಾಯ್ದೆಗೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿದೆ.
ಡಿಸಿಪಿಗಳಾದ ಸಿದ್ಧಾರ್ಥ ಗೋಯೆಲ್, ದಿನೇಶ್ ಕುಮಾರ್, ಎಸಿಪಿಗಳಾದ ಗೀತಾ ಕುಲಕರ್ಣಿ, ಧನ್ಯಾ ನಾಯಕ್ ಸುದ್ದಿಗೋಷ್ಠಿಯಲ್ಲಿದ್ದರು.
ಆರೋಪಿಗಳ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಗೀತಾ ಡಿ ಕುಲಕರ್ಣಿ, ದಕ್ಷಿಣ ಉಪವಿಭಾಗದ ಎಸಿಪಿ ಧನ್ಯಾ ಎನ್ ನಾಯಕ್, ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ, ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕರಾದ ಶಿವಕುಮಾರ್ ಕೆ.ಆರ್, ಸಿಸಿಬಿ ಪಿಎಸ್‌ಐಯವರಾದ ಸುದೀಪ್ ಎಂ.ವಿ, ಹರೀಶ್ ಪದವಿನಂಗಡಿ, ನರೇಂದ್ರ ಹಾಗೂ ಮಂಗಳೂರು ಗ್ರಾಮಾಂತರ ಠಾಣೆಯ ಪಿಎಸ್‌ಐ ಆರುಣ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.