ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಕಂಬಳದ ದೂಜನಿಗೆ ಗೌರವಾಭಿನಂದನೆ - ತುಳುನಾಡ ಸಂಸ್ಕೃತಿಗೆ ಸಂದ ಅಪರೂಪದ ಗೌರವ

mng--16 feb srinivas kambala
Published on

ಮಂಗಳೂರು: ಮುಕ್ಕ ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಭಾನುವಾರ ನಡೆದ ಪ್ರತಿಭಾ ದಿನಾಚರಣೆ ಸಂದರ್ಭದಲ್ಲಿ ಕಂಬಳ ಕ್ಷೇತ್ರದಲ್ಲಿ 69 ಪದಕ ಗೆದ್ದ ಕಂಬಳದ ಕಣ್ಮಣಿ, 6 ಬಾರಿಯ ಚಾಂಪಿಯನ್ ಕೋಣ ಪದವು ಕಾನಡ್ಕ ದೂಜನಿಗೆ ಶ್ರೀನಿವಾಸ ವಿಶ್ವವಿದ್ಯಾಲಯದ ವತಿಯಿಂದ ಗೌರವಾಭಿನಂದನೆ ಸಲ್ಲಿಸಲಾಯಿತು.

ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಸಿಎ. ಎ. ರಾಘವೇಂದ್ರ ರಾವ್ ಮಾತನಾಡಿ, ಪ್ರಸ್ತುತ ಅನಾರೋಗ್ಯದ ಕಾರಣದಿಂದ ಕಂಬಳ ಓಟವನ್ನು ನಿಲ್ಲಿಸಿ ವಿಶ್ರಾಂತಿ ಜೀವನಕ್ಕೆ ಮುಂದಾದ ಪದವು ಕಾನಡ್ಕ ದೂಜನಿಗೆ ಶುಭವನ್ನು ಕೋರಿದರು. ತುಳುನಾಡಿನ ಸಂಸ್ಕೃತಿಗೆ ಮತ್ತಷ್ಟು ಮೆರುಗನ್ನು ನೀಡಿದ ಚಾಂಪಿಯನ್ ಪದವು ಕಾನಡ್ಕ ದೂಜನಿಗೆ ಗೌರವ ಸಲ್ಲಿಸುವುದು ಹೆಮ್ಮೆಯ ವಿಷಯ. ಎಲ್ಲಿಯೂ ನಡೆಯದೇ ಇರುವಂತಹ ಅಪರೂಪವಾದ ಈ ಕಾರ್ಯಕ್ರಮದಲ್ಲಿ ತಾವು ಭಾಗಿಯಾಗಿರುವುದು ಸಂತಸ ತಂದಿದೆ ಎಂದು ಹೇಳಿದರು.

ಶ್ರೀನಿವಾಸ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ. ಎ.ಶ್ರೀನಿವಾಸ ರಾವ್ , ಶ್ರೀನಿವಾಸ ವಿಶ್ವವಿದ್ಯಾಲಯದ ವಿಶ್ವಸ್ತ ಮಂಡಳಿಯ ಸದಸ್ಯರಾದ ಎ. ವಿಜಯಲಕ್ಷ್ಮಿ ಆರ್. ರಾವ್ ಮತ್ತು ಪ್ರೊ. ಇ.ಆರ್. ಎ. ಮಿತ್ರಾ ಎಸ್ ರಾವ್ ಅವರು ಚಾಂಪಿಯನ್ ಕೋಣ ಪದವು ಕಾನಡ್ಕ ದೂಜನನ್ನು ಗೌರವಪೂರ್ವಕವಾಗಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಪದವು ಕಾನಡ್ಕ ದೂಜನ ಯಜಮಾನರಾದ ಡಾಲ್ಫಿ ಡಿಸೋಜ ಅವರನ್ನು ಹಾಗೂ ಕಂಬಳದ ತಂಡದ ಎಲ್ಲಾ ಸದಸ್ಯರನ್ನು ಸನ್ಮಾನಿಸಲಾಯಿತು.

ವಿಶ್ವವಿದ್ಯಾಲಯದ ಕುಲಸಚಿವ ಡಾ. ಅನಿಲ್ ಕುಮಾರ್, ಮೌಲ್ಯಮಾಪನ ಕುಲಸಚಿವ ಡಾ.ಶ್ರೀನಿವಾಸ ಮಯ್ಯ, ಅಭಿವೃದ್ಧಿ ಕುಲಸಚಿವ ಡಾ. ಅಜಯ್ ಕುಮಾರ್, ಸಹಾಯಕ ಕುಲಸಚಿವ ಡಾ. ಜಯಶ್ರೀ ಬೋಳಾರ್, ಕಾರ್ಯಕ್ರಮದ ಸಂಚಾಲಕ ಡಾ. ಪವಿತ್ರಾ ಕುಮಾರಿ, ಶ್ರೀನಿವಾಸ ವಿಶ್ವವಿದ್ಯಾಲಯದ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಕಂಬಳದ ಅಭಿಮಾನಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net