ತುಂಬೆ ಡ್ಯಾಂ ಮತ್ತಷ್ಟು ಇಳಿಕೆ, ಎಂಟು ವರ್ಷದಲ್ಲೇ ದಾಖಲೆ

water
Published on

ಮಂಗಳೂರು: ನಗರಕ್ಕೆ ನೀರು ಪೂರೈಸುವ ತುಂಬೆ ಡ್ಯಾಂನಲ್ಲಿ ಶನಿವಾರ ನೀರಿನ ಸಂಗ್ರಹ 3.80 ಮೀಟರ್‌ಗೆ ಇಳಿಕೆಯಾಗಿದೆ. ಇದು ಎಂಟು ವರ್ಷಗಳಲ್ಲಿ ದಾಖಲೆ ಇಳಿಕೆಯಾಗಿದೆ.


ಎಎಂಆರ್ ಡ್ಯಾಂನಲ್ಲೂ ನೀರಿನ ಮಟ್ಟ 15.34 ಮೀಟರ್‌ಗೆ ಇಳಿಕೆಯಾಗಿದೆ. ತುಂಬೆ ಡ್ಯಾಂಗೆ ಹರೇಕಳ ಡ್ಯಾಂನಿಂದ ನೀರು ಪಂಪಿಂಗ್ ಮಾಡುವ ಪ್ರಕ್ರಿಯೆ ನಿರಂತರವಾಗಿ ಮುಂದುವರಿದಿದೆ. ರೇಷನಿಂಗ್ ಮಾಡಿದರೂ ದಿನದಿಂದ ದಿನಕ್ಕೆ ನೀರಿನ ಮಟ್ಟ ಕುಸಿಯುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.


ತುಂಬೆ ಡ್ಯಾಂನಲ್ಲಿ ಗುರುವಾರ 3.92, ಶುಕ್ರವಾರ 3.86 ಮೀಟರ್ ನೀರು ಸಂಗ್ರಹ ಇತ್ತು. ಎಎಂಆರ್ ಡ್ಯಾಂ ನೀರಿನ ಮಟ್ಟ 15.48, ಎಎಂಆರ್ ಡ್ಯಾಂನಲ್ಲೂ ನೀರಿನ ಮಟ್ಟ 15.39 ಮೀಟರ್ ಇತ್ತು. ದಿನದಿಂದ ದಿನಕ್ಕೆ ಡ್ಯಾಂಗಳಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿದೆ. ಸುಬ್ರಹ್ಮಣ್ಯ, ಕಡಬ ಭಾಗದಲ್ಲಿ ಮಳೆಯಾಗಿದ್ದು, ಪ್ರತಿದಿನ ಉತ್ತಮ ಮಳೆ ಮುಂದುವರಿದರೆ ಮಾತ್ರ ಡ್ಯಾಂಗಳಿಗೆ ನೀರು ಹರಿದು ಬರಲು ಸಾಧ್ಯವಿದೆ.


ಟ್ಯಾಂಕರ್ ನೀರಿಗೆ ಬೇಡಿಕೆ ಹೆಚ್ಚಳ: ರೇಶನಿಂಗ್ ಆರಂಭವಾದ ಬಳಿಕ ನಗರದಲ್ಲಿ ಟ್ಯಾಂಕರ್ ನೀರಿಗೆ ಬೇಡಿಕೆ ಹೆಚ್ಚಾಗಿದೆ. ನಗರದ ಕೆಲವೊಂದು ವಸತಿ ಸಮುಚ್ಚಯಗಳಿಗೆ, ಕೆಲವು ವಾರ್ಡ್‌ಗಳಲ್ಲಿ ಎತ್ತರದ ಸ್ಥಳಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಹೋಟೆಲ್, ವಾಣಿಜ್ಯ ಸಂಕೀರ್ಣಗಳಿಗೂ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಸಾರ್ವಜನಿಕರು ನೀರು ಪೋಲು ಮಾಡದೆ ಅಗತ್ಯ ಇರುವಷ್ಟೇ ಬಳಕೆ ಮಾಡಬೇಕು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.


ಗ್ರಾಮೀಣ ಭಾಗದಲ್ಲೂ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ನೀರಿನ ಅಭಾವ ಉಂಟಾಗಿದೆ. ಅಲ್ಲಿಗೆ ಟ್ಯಾಂಕರ್ ಮೂಲಕ ಗ್ರಾಮ ಪಂಚಾಯಿತಿಗಳು ವ್ಯವಸ್ಥೆ ಕಲ್ಪಿಸುತ್ತಿವೆ. ನಗರ ವ್ಯಾಪ್ತಿಯಲ್ಲಿದ್ದ ಹಲವು ವಾಹನ ವಾಶಿಂಗ್ ಸೆಂಟರ್‌ಗಳು ನೀರಿನ ಕೊರತೆಯಿಂದ ಬಂದ್ ಆಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net