ಕರಾವಳಿ ಜಿಲ್ಲೆಗಳಲ್ಲಿ ತುಳಸಿ ಹಬ್ಬ ಹೂವು, ಹಣ್ಣು ಖರೀದಿ ಭರಾಟೆ

mng-nov12-market
Published on

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ತುಳಸಿ ಹಬ್ಬ ಆಚರಣೆ ವಿಶೇಷ. ಬುಧವಾರ ನಡೆಯುವ ತುಳಸಿ ಹಬ್ಬಕ್ಕೆ ಮಂಗಳವಾರ ಹೂವು, ಹಣ್ಣು ಖರೀದಿ ಭರಾಟೆ ಜೋರಾಗಿತ್ತು.

ಮಂಗಳೂರು ನಗರದ ಲಾಲ್‌ಭಾಗ್, ಸ್ಟೇಟ್‌ಬ್ಯಾಂಕ್, ಪುರಭವನದ ಎದುರು, ಕಂಕನಾಡಿ ಮೊದಲಾದ ಕಡೆ ಬಯಲು ಸೀಮೆಗಳಿಂದ ಆಗಮಿಸಿದ ವ್ಯಾಪಾರಿಗಳು ಹೂವು ಮಾರಾಟ ಮಾಡಿದರು. ಸೇವಂತಿಗೆ ಮೊಳಕ್ಕೆ 100 ರೂ. ದರದಲ್ಲಿ ವ್ಯಾಪಾರವಾಯಿತು. ಬಾಳೆಹಣ್ಣು, ಕಿತ್ತಳೆ ಮೊದಲಾದ ಹಣ್ಣುಗಳ ದರದಲ್ಲಿ ತುಸು ಹೆಚ್ಚಳವಾಗಿದೆ.

ಪ್ರತಿ ವರ್ಷ ದೀಪಾವಳಿಯ ಜೊತೆಗೂಡಿ ತುಳಸಿ ಹಬ್ಬ ಆಚರಿಸಲಾಗುತ್ತದೆ. ವಿಷ್ಣು ಹಾಗೂ ತುಳಸಿಯ ಮದುವೆಯ ಆಚರಣೆ ಎನ್ನುವ ನಂಬಿಕೆ ಈ ಆಚರಣೆಯ ಹಿಂದಿದೆ. ಚಾಂದ್ರಮಾನ ಕಾರ್ತಿಕಮಾಸ ಶುಕ್ಲಪಕ್ಷದ 12ನೇ ದಿನ ಅಂದರೆ ದ್ವಾದಶಿಯಂದು ಈ ಹಬ್ಬವನ್ನು ಉತ್ಥಾನ ದ್ವಾದಶಿ ಎಂದು ಆಚರಿಸಲಾಗುತ್ತದೆ. ತುಳಸಿಗಿಡದೊಂದಿಗೆ ಬೆಟ್ಟದನೆಲ್ಲಿಕಾಯಿ ಗಿಡವನ್ನೂ ನೆಟ್ಟು ಪೂಜಿಸುವ ರೂಢಿ ಇದೆ. ದೀಪಗಳಿಂದ ಬೃಂದಾವನವನ್ನು ಅಲಂಕರಿಸಲಾಗುತ್ತದೆ. ಈ ದಿನದಂದು ತುಳಸಿ ಕಟ್ಟೆಯನ್ನು ರಂಗೋಲಿ, ಹೂವು ಹಾಗೂ ಮಾವಿನ ಎಲೆಗಳಿಂದ ಅಲಂಕರಿಸಿ ಕೃಷ್ಣನ ಮೂರ್ತಿಯಿರಿಸಿ ಪೂಜಿಸಲಾಗುತ್ತದೆ. ದೀಪಾವಳಿಯಂತೆ ಈ ದಿನವೂ ಪಟಾಕಿಯ ಹಚ್ಚಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net