

ಮಂಗಳೂರು: ನಗರದ ಹೊರ ವಲಯದ ಹೊಸಬೆಟ್ಟು ಬಳಿಯ ಕುಳಾಯಿ ಜೆಟ್ಟಿ ಸಮೀಪ ಬುಧವಾರ ಮಧ್ಯಾಹ್ನ ಸಮುದ್ರದಲ್ಲಿ ಈಜಲು ಹೋಗಿದ್ದ ನಾಲ್ವರು ಯುವಕರ ಪೈಕಿ ಮೂವರು ಸಮುದ್ರ ಪಾಲಾಗಿದ್ದಾರೆ. ಓರ್ವನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಉಪ್ಪರಿಗೇನಹಳ್ಳಿ ನಿವಾಸಿ ಶಿವಲಿಂಗಪ್ಪ ಎಂಬುವವರ ಪುತ್ರ ಮಂಜುನಾಥ್ ಎಸ್.(31), ಶಿವಮೊಗ್ಗ ಜಿಲ್ಲೆಯ ಶಿವಕುಮಾರ್(28), ಬೆಂಗಳೂರು ಜೆ.ಪಿ. ನಗರ ನಿವಾಸಿ ಸತ್ಯವೇಲು(30) ನೀರು ಪಾಲಾದವರು. ಬೀದರ್ ಜಿಲ್ಲೆಯ ಹಂಗಾರಗಾ ನಿವಾಸಿ ಪರಮೇಶ್ವರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೂವರ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ನಾಲ್ವರೂ ಬೆಂಗಳೂರಿನ ಎಎಂಸಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿದ್ದರು. ಮಂಜುನಾಥ್ ಕಂಪೆನಿಯೊಂದರಲ್ಲಿ ಉದ್ಯೋಗ ಪಡೆದಿದ್ದರೆ ಉಳಿದವರು ಉದ್ಯೋಗದ ಹುಡುಕಾಟದಲ್ಲಿದ್ದರು. ಎಲ್ಲರೂ ಸ್ನೇಹಿತರಾಗಿದ್ದರು. ಹಾಗಾಗಿ ಪ್ರವಾಸಕ್ಕೆಂದು ಜತೆಯಾಗಿ ಬಂದ್ದಿರು. ಅವರು ಮಂಗಳವಾರ ರಾತ್ರಿ ಕಾರಿನಲ್ಲಿ ಬೆಂಗಳೂರಿನಿಂದ ಹೊರಟು ಬುಧವಾರ ಬೆಳಗ್ಗೆ ಮಂಗಳೂರು ತಲುಪಿದ್ದರು. ಇಲ್ಲಿನ ಹೊಟೇಲೊಂದರಲ್ಲಿ ಬೆಳಗ್ಗಿನ ಉಪಹಾರ ಸೇವಿಸಿ ಬಳಿಕ ಮಧ್ಯಾಹ್ನದ ವೇಳೆ ಕುಳಾಯಿ ಕಿರು ಜೆಟ್ಟಿ ಬಳಿಗೆ ಬಂದಿದ್ದರು. ಅಲ್ಲಿ ಎಲ್ಲರೂ ಸಮುದ್ರಕ್ಕಿಳಿದು ಆಟವಾಡುತ್ತಿದ್ದರು. ಸಮುದ್ರದ ಆಳದ ಬಗ್ಗೆ ಮಾಹಿತಿ ಇರದ ಇವರು ಈ ಸಂದರ್ಭ ಅಪ್ಪಳಿಸಿದ ಬೃಹತ್ ಅಲೆಗೆ ಸಿಲುಕಿ ನೀರು ಪಾಲಾಗಿದ್ದಾರೆ.
ಘಟನೆ ಸಂದರ್ಭ ಅಲ್ಲಿದ್ದ ಮೀನುಗಾರರು ತಕ್ಷಣ ನಾಲ್ವರನ್ನೂ ರಕ್ಷಿಸಲು ಪ್ರಯತ್ನ ಮಾಡಿದ್ದಾರೆ. ಅಷ್ಟರಲ್ಲಿ ಮೂವರು ನೀರು ಪಾಲಾಗಿದ್ದರು. ಓರ್ವನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ಸಿಕ್ಕಿದ ತಕ್ಷಣ ಸುರತ್ಕಲ್ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ. ಬಲೆ, ಹಗ್ಗದ ಸಹಾಯದಿಂದ ಮುಳುಗಿದ್ದ ಮೂವರನ್ನು ಪತ್ತೆ ಮಾಡಿ ದಡಕ್ಕೆ ತರಲಾಯಿತು. ಸತತ ಮೂರೂವರೆ ಗಂಟೆಯ ಶೋಧಕಾರ್ಯ ನಡೆಸಿ ಮುಳುಗಿದವರ ಮೃತದೇಹ ಆಳ ಸಮುದ್ರಕ್ಕೆ ಹೋಗದಂತೆ ತಡೆದು ಪತ್ತೆ ಹಚ್ಚುವಲ್ಲಿ ಸ್ಥಳೀಯರು, ಈಜುಗಾರರು ಪೊಲೀಸರಿಗೆ ಸಹಕಾರ ನೀಡಿದರು.
ಮೃತರ ಮನೆಯವರಿಗೆ ಮಾಹಿತಿ ನೀಡಲಾಗಿದೆ. ಅವರು ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
===========================