

‘‘ಪುಣ್ಯಾತ್ಮರು ಎರಡು ವರ್ಷಗಳ ಹಿಂದೆ ನಮ್ಮನ್ನು ನೆಟ್ಟು, ನೀರು ಹಾಕಿ ಪೋಷಣೆ ಮಾಡುತ್ತಿದ್ದರು. ಖುಷಿಯಲ್ಲಿ ಗಾಳಿಯಲ್ಲಿ ತೇಲಾಡುತ್ತಾ, ಆಮ್ಲಜನಕ ಬಿಡುಗಡೆ ಮಾಡುತ್ತಾ ಸ್ವಚ್ಛಂದವಾಗಿ ಬೆಳೆಯುತ್ತಿದ್ದೆವು. ನಾವು ಯಾರಿಗೂ ಅನ್ಯಾಯ ಮಾಡಲು ಹೋಗಿಲ್ಲ. ಆದರೆ ದುರುಳರು ನಮ್ಮ ಮೇಲೆ ರಾಸಾಯನಿಕ ಸಿಂಪಡಿಸಿ, ಕರಟಿ ಹೋಗುವಂತೆ ಮಾಡಿದ್ದಾರೆ.’’
ಇದು ಹಂಪನಕಟ್ಟೆ ಹಾಗೂ ಬಾವುಟಗುಡ್ಡೆಯಲ್ಲಿರುವ ನಾಲ್ಕೈದು ಹಣ್ಣಿನ ಗಿಡಗಳ ಮೂಕ ರೋದನ. ದುಷ್ಕರ್ಮಿಗಳ ದಾಳಿ ಯಾವುದೇ ಸಂದರ್ಭದಲ್ಲಿ ನಡೆಯುವ ಸಾಧ್ಯತೆಯಿಂದ ಇನ್ನಷ್ಟು ಗಿಡಗಳು ಭಯದ ವಾತಾವರಣದಲ್ಲಿ ಬದುಕುತ್ತಿವೆ. ನೆಟ್ಟು, ಪೋಷಿಸುತ್ತಿರುವ ಪರಿಸರ ಪ್ರೇಮಿಗಳು ಬೇಸರ, ಜತೆಗೆ ಆಕ್ರೋಶದಲ್ಲಿದ್ದಾರೆ.
ಪರಿಸರ ಪ್ರೇಮಿ ಮಾಧವ ಉಳ್ಳಾಲ್ ನೇತೃತ್ವದಲ್ಲಿ ರಸ್ತೆ ಬದಿ ಜಾಗ ಇರುವಲ್ಲಿ ಪಾಲಿಕೆಯ ಅನುಮತಿಯೊಂದಿಗೆ ಅರಣ್ಯ ಇಲಾಖೆಯ ಸಹಯೋಗದಲ್ಲಿ ಹಂಪನಕಟ್ಟೆ, ಬಾವುಟಗುಡ್ಡ ಭಾಗದಲ್ಲಿ ನೇರಳೆ, ನೆಲ್ಲಿ, ಮಾವು ಮೊದಲಾದ ಹಣ್ಣುಗಳ ಗಿಡ ನೆಟ್ಟಿದ್ದರು. ಅದಕ್ಕೆ ಸ್ಥಳೀಯರು ಬೇಸಿಗೆಯಲ್ಲಿ ನೀರು ಹಾಕಿ ಪೋಷಣೆ ಮಾಡುತ್ತಿದ್ದರು. ಅದರಿಂದ ಯಾರಿಗೂ ತೊಂದರೆಯಾಗುತ್ತಿರಲಿಲ್ಲ. ಆದರೂ ಅದನ್ನು ನಾಶ ಮಾಡಲು ಯತ್ನಿಸಿದ್ದಾರೆ.
ಮಂಗಳೂರಿನಲ್ಲಿ ಹಸಿರು ಕಡಿಮೆಯಾಗುತ್ತಿದೆ. ತಾಪಮಾನ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಅಭಿವೃದ್ಧಿಯ ಹೆಸರಿನಲ್ಲಿ ನಗರದಲ್ಲಿದ್ದ ಗಿಡ, ಮರಗಳೆಲ್ಲವೂ ನಾಶವಾಗುತ್ತಿವೆ. ಈ ನಡುವೆ ನಗರದ ಪರಿಸರ ಪ್ರೇಮಿ ಸಂಘಟನೆಗಳು ಹಸಿರು ಪರಿಸರ ಉಳಿಸುವ ನಿಟ್ಟಿನಲ್ಲಿ ಸರ್ಕಾರಿ ಜಾಗ ಇರುವಲ್ಲಿ ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದಾರೆ. ಆದರೆ ಅದನ್ನು ಸಹಿಸದ ಕೆಲವರು ಇಂತಹ ಹೀನ ಕೃತ್ಯ ಎಸಗುತ್ತಿರುವುದು ಪರಿಸರಕ್ಕೆ ಮಾಡಿದ ದ್ರೋಹವಾಗಿದೆ.
ಜನರು ಉಸಿರಾಡುವ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿದೆ ಎನ್ನುವ ಎಚ್ಚರಿಕೆ ಸಂದೇಶವನ್ನು ಈಗಾಗಲೇ ಗ್ರೀನ್ ಪೀಸ್ ಸಂಶೋಧನಾ ವರದಿ ತಿಳಿಸಿದೆ. ನಗರದಲ್ಲಿ ವಾಹನಗಳ ಸಂಖ್ಯೆ ದಿನದಿಂದ ಹೆಚ್ಚಾಗುತ್ತಿದೆ. ಇದರಿಂದ ಬಿಡುಗಡೆಯಾಗುವ ವಿಷಾನಿಲವನ್ನು ಜನರು ಉಸಿರಾಡುವಂತಾಗಿದೆ. ಪರಿಸರವಾದಿಗಳ ಎಚ್ಚರಿಕೆಯ ಕೂಗು ಯಾರಿಗೂ ಕೇಳಿಸುತ್ತಿಲ್ಲ. ಗಿಡ, ಮರ ರಕ್ಷಣೆ ಮಾಡಬೇಕಾದ ಇಲಾಖೆಗಳು ಕೂಡ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿಲ್ಲ. ಇದರಿಂದಾಗಿ ಪರಿಸರದ ಮೇಲೆ ದಾಳಿ ನಿರಂತರವಾಗಿ ನಡೆಯುತ್ತಲೇ ಇದೆ.
ಮಂಗಳೂರು ನಗರದಲ್ಲಿ ಗಿಡ ಮರಗಳ ಸಂಖ್ಯೆ ತೀರಾ ಕಡಿಮೆಯಾಗುತ್ತಿದೆ. ಹಸಿರು ಪರಿಸರ ಇಲ್ಲದೆ ತಾಪಮಾನ ಏರಿಕೆಯಾಗುತ್ತಿದೆ. ಪರಿಸರ ಪ್ರೇಮಿಗಳು ಹಸಿರೀಕರಣಗೊಳಿಸಲು ತಮ್ಮಿಂದಾದ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಅದನ್ನು ನಾಶ ಮಾಡುವುದನ್ನು ನೋಡಿದಾಗ ಬೇಸರವಾಗುತ್ತದೆ. ಜಿಲ್ಲಾಡಳಿತ, ಅರಣ್ಯ ಇಲಾಖೆ ಅಂತಹ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.
ಮಾಧವ ಉಳ್ಳಾಲ್
ಪರಿಸರ ಪ್ರೇಮಿ