ನಯನ ಕುಮಾರಿ, ಶಂಕರ ಶೆಟ್ಟಿಗೆ ಅಂ.ರಾ. ರೋಟರಿ ರಾಷ್ಟ್ರ ನಿರ್ಮಾತ ಪ್ರಶಸ್ತಿ

mng--14 sep Rotary award
Published on

ಮಂಗಳೂರು : ಶಿಕ್ಷಕರು ನಿಸ್ವಾರ್ಥ ಸೇವಾ ಮನೋಭಾವ ಮತ್ತು ಶ್ರದ್ಧೆಯಿಂದ ವಿದ್ಯಾರ್ಥಿಗಳಿಗೆ ಶಿಸ್ತು ಮತ್ತು ಮೌಲ್ಯಧಾರಿತ ಶಿಕ್ಷಣ ಧಾರೆಯೆರಗಿ ಭವಿಷ್ಯದ ಉತ್ತಮ ನಾಗರಿಕರಾಗಿ ನಿರೂಪಿಸುವ ಶ್ರೇಷ್ಠ ಜವಾಬ್ದಾರಿ ಹೊಂದಿದ್ದಾರೆ ಎಂದು ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಡಾ.ರಂಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ರೋಟರಿ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಆಶ್ರಯದಲ್ಲಿ ಇತ್ತೀಚೆಗೆ ಈಡನ್ ಕ್ಲಬ್ ಸಭಾಂಗಣದಲ್ಲಿ ಜರಗಿದ ಸಂಸ್ಥೆಯ ಮೂಲಭೂತ ಶಿಕ್ಷಣ ಮತ್ತು ಸಾಕ್ಷಾರತೆ ಯೋಜನೆ ಹಾಗೂ ಶಿಕ್ಷಕರ ದಿನಾಚರಣೆಯ ಅಂಗವಾಗಿ ಆಯೋಜಿಸಿದ ಅಂತರಾಷ್ಟ್ರೀಯ ರೋಟರಿ ರಾಷ್ಟ್ರ ನಿರ್ಮಾತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.


ಈ ಸಂದರ್ಭದಲ್ಲಿ ದೇರಳಕಟ್ಟೆ ನೇತಾಜಿ ಸುಭಾಷ್‌ಚಂದ್ರ ಬೋಸ್ ಸರ್ಕಾರಿ ಶಾಲೆಯ ಶಿಕ್ಷಕಿ ನಯನ ಕುಮಾರಿ ಹಾಗೂ ಬೋಳಿಯ ಕುಪ್ಪೆ ಪದವು ಸರ್ಕಾರಿ ಶಾಲೆಯ ಶಿಕ್ಷಕ ಶಂಕರ ಶೆಟ್ಟಿ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆ, ನೀಡಿದ ಗಮನಾರ್ಹ ಕೊಡುಗೆ, ಸಾಧಿಸಿದ ಅಮೂಲ್ಯ ಸಾಧನೆಯನ್ನು ಪರಿಗಣಿಸಿ ಅಂತರಾಷ್ಟ್ರೀಯ ರೋಟರಿ ರಾಷ್ಟ್ರ ನಿರ್ಮಾತ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಶಸ್ತಿ ವಿಜೇತರರು ರೋಟರಿ ಸಂಸ್ಥೆಯ ನಿಸ್ವಾರ್ಥ ಸಮಾಜ ಸೇವಾ ಮನೋಭಾವವನ್ನು ಕೊಂಡಾಡಿ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಶ್ಲಾಘನೀಯ ಹಾಗೂ ಇದೊಂದು ಬಯಸದೆ ಬಂದ ಭಾಗ್ಯ ಮತ್ತು ಈ ಪ್ರಶಸ್ತಿಯು ಶಿಕ್ಷಕರ ವೃಂದದವರಿಗೆ ಸಲ್ಲುತ್ತದೆ ಎಂದು ಕೃತಜ್ಞತೆ ಸಲ್ಲಿಸಿದರು. ಸಂಸ್ಥೆಯ ಅಧ್ಯಕ್ಷ ಗಣೇಶ್ ಕೊಡ್ಲಮೊಗರು ಸ್ವಾಗತಿಸಿ, ಪ್ರಶಸ್ತಿಯ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು.


ವೃತ್ತಿಪರ ಸೇವಾ ಯೋಜನೆಯ ನಿರ್ದೇಶಕ ಕ್ಯಾನುಟ್ ಪಿಂಟೋ, ಸಮುದಾಯ ಸೇವಾ ಯೋಜನೆಯ ಅಧ್ಯಕ್ಷೆ ಸರಿತಾ ಡಿಸೋಜ, ಯುವಜನ ಸೇವಾ ಯೋಜನೆಯ ನಿರ್ದೇಶಕ ಸುಮಿತ್ ರಾವ್ ಮತ್ತು ನಿಕಟ ಪೂರ್ವ ಅಧ್ಯಕ್ಷ ಪ್ರಶಾಂತ್ ರೈ ಉಪಸ್ಥಿತರಿದ್ದರು. ಕಾರ್ಯದರ್ಶಿ ಸುದೇಶ್ ವರದಿ ಮಂಡಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net